

ಹಾವೇರಿ: ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ನೇರ ವೇತನ ಪಾವತಿ ಹಾಗೂ ಪರಿಷತ ವೇತನ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ನೇತೃತ್ವದಲ್ಲಿ ನೂರಾರು ನೌಕರರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದ ಮೈಲಾರ ಮಹದೇವಪ್ಪ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಮುನ್ಸಿಪಲ್ ಹೈಸ್ಕೂಲ್ ರೋಡ, ಜೆ.ಎಚ್ ಪಟೇಲ್ ಸರ್ಕಲ್, ಡಿಸಿ ಆಫೀಸ್ ರೋಡ್ ಮಾರ್ಗವಾಗಿ ಸಂಚರಿಸಿ ಜಿಲ್ಲಾಡಳಿತ ಭವನ ತಲುಪಿತು. ನಂತರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ನೇತೃತ್ವ ವಹಿಸಿದ್ದ ಜಿಲ್ಲಾಧ್ಯಕ್ಷ ಗುರುರಾಜ ಕಂಬಳಿ ಮಾತನಾಡಿ, ಸರ್ಕಾರಿ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ಹೊರಗುತ್ತಿಗೆ ನೌಕರರ ಕೊಡುಗೆ ಮಹತ್ವದ್ದಾಗಿದೆ. ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಉದ್ಯೋಗದ ಸ್ಥಿರತೆ, ಸಮರ್ಪಕ ವೇತನ ಹಾಗೂ ನೇರ ವೇತನ ಪಾವತಿಯಂತಹ ಸೌಲಭ್ಯಗಳು ಸಿಗದ ಪರಿಣಾಮ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ. ಸರ್ಕಾರದ ಪರಿಷತ ವೇತನದ ಆದೇಶ 2026 ಮೇ 22 ರಿಂದ ಜಾರಿಯಲ್ಲಿದ್ದರೂ ಅದರ ಸಮರ್ಪಕ ಅನುಷ್ಠಾನವಾಗಿಲ್ಲ. ಪರಿಣಾಮ ಎಷ್ಟೋ ಹೊರಗುತ್ತಿಗೆ ನೌಕರರು ಬಾಡಿಗೆ ಮನೆಯಲ್ಲಿ ವಾಸವಿದ್ದು, ಕುಟುಂಬ ಮುನ್ನೆಡೆಸಲು, ವೃದ್ಧ ಪೋಷಕರು, ಮಕ್ಕಳಿಗೆ ಶಿಕ್ಷಣ ಕೊಡಿಸಲು ಪರದಾಡುವಂತಾಗಿದೆ. ಆದ್ದರಿಂದ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಹೊರಗುತ್ತಿಗೆ ನೌಕರರಾದ ದುರುಗೇಶ ಒಂದುವಾಗಲ, ಶಿವರಾಜ ಕಾಳೆ, ಆನಂದ ವಡಕಮ್ಮನವರ, ಪುಟ್ಟಪ್ಪ ಕ್ಯಾಡದ, ಚಂದ್ರಪ್ಪ ಕರೆಬಸಪ್ಪನವರ, ಸುರೇಶ ಸಾಗರ, ಅರುಣ ಬಳ್ಳಾರಿ, ಜಗದೀಶ ಅಂಗಡಿ, ರೇಣುಕಾ ಕಡಕೋಳ, ಅನುರಾಧ ಮ್ಯಾಗೇರಿ, ಅಕ್ಷತಾ ದೇಶಪಾಂಡೆ, ವಿರೇಶ ಹಿರೇಗೌಡ್ರ, ಸುರೇಶ ಗೌರಾಪುರ, ಮಂಜುನಾಥ ಕೋಳೂರ, ಅಶೋಕ ದೇವಗಿರಿ, ಮಂಜುನಾಥ ಚೌಡಕಿ ಸೇರಿ ನೂರಾರು ಜನ ಪಾಲ್ಗೊಂಡಿದ್ದರು.