ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಹಂಗಾಮಿ ಸ್ಪೀಕರ್ ರುದ್ರಪ್ಪ ಹೇಳಿಕೆ

ಪೊಲೀಸ್ ಠಾಣೆ ಉದ್ಘಾಟನೆ
ಪೊಲೀಸ್ ಠಾಣೆ ಉದ್ಘಾಟನೆ
Published on

ರಾಣೆಬೆನ್ನೂರು: ವಿಧಾನಸಭೆಯಲ್ಲಿ ಸ್ಪೀಕರ್ ಆಗಿರುವ ಬದಲು ಮಂತ್ರಿಯಾಗಿ ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿ ಮಾಡುವ ಆಸೆಯಿದೆ. ಆದ್ದರಿಂದ 2ನೇ ಸಚಿವ ಸಂಪುಟ ವಿಸ್ತರಣೆಯಲ್ಲಿ ನನಗೂ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆಯಿಟ್ಟಿರುವೆ ಎಂದು ವಿಧಾನಸಭೆ ಹಂಗಾಮಿ ಸ್ಪೀಕರ್ ರುದ್ರಪ್ಪ ಲಮಾಣಿ ಹೇಳಿದರು.

ನಗರದ ಹಳೇ ಪಿ.ಬಿ. ರಸ್ತೆಯ ಶಿವಾ ಕಾಲೇಜ್ನ ಬಳಿ ನೂತನವಾಗಿ ನಿಮಿರ್ಸಿದ ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಈಗ ಡಿ.ಕೆ. ಶಿವಕುಮಾರ ಅವರೇ ಮುಖ್ಯಮಂತ್ರಿಯಾಗಿದ್ದಾರೆ. ಮುಂಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುತ್ತಾರೆಂಬ ಭರವಸೆಯಿದೆ.

ಇದೀಗ ನಾನು ವಿಧಾನಸಭೆಯ ಹಂಗಾಮಿ ಅಧ್ಯಕ್ಷನಾಗಿದ್ದು ನಾನು ಒಂದು ಪಕ್ಷದ ಪರವಾಗಿ ಮಾತನಾಡಲು ಬರುವುದಿಲ್ಲ. ಅದಕ್ಕಾಗಿ ಮುಖ್ಯಮಂತ್ರಿಗಳು ನನಗೆ ಸಚಿವ ಸ್ಥಾನ ನೀಡುವ ಅಗಾಧವಾದ ವಿಶ್ವಾಸವಿದ್ದು, ಅದಕ್ಕಾಗಿ ನಾನು ಕಾಯುವೆ. ಸಚಿವ ಸ್ಥಾನ ನೀಡುವ ಸಂಬಂಧ ಯಾರ ಮೇಲೂ ಬೀರಲು ಯಾವುದೇ ರೀತಿಯ ಒತ್ತಡ, ಪ್ರಭಾವ ಬೀರಲು ಬರುವುದಿಲ್ಲ. ಕೈ ಹೈಕಮಾಂಡ್ ಬಳಿ ಕೇಳೋದಕ್ಕೂ ಆಗುವುದಿಲ್ಲ. ಅದು ನನ್ನ ಕೆಲಸವೂ ಅಲ್ಲ. ಮುಖ್ಯಮಂತ್ರಿಗಳೇ ಸಚಿವ ಸ್ಥಾನ ನೀಡಿದರೆ ಅದನ್ನು ನಿಭಾಯಿಸಲು ಸಿದ್ಧನಿದ್ದೇನೆ ಎಂದರು.

ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಮಂಜುನಾಥ ಹಲವಾಗಲ, ಜಿಪಂ ಮಾಜಿ ಅಧ್ಯಕ್ಷ ಏಕನಾಥ ಭಾನುವಳ್ಳಿ, ರವೀಂದ್ರಗೌಡ ಪಾಟೀಲ, ಎಸ್ಪಿ ಯಶೋಧಾ ವಂಟಗೋಡಿ, ಎಎಸ್ಪಿ ಎಲ್.ವೈ. ಶಿರಕೋಳ, ಡಿವೈಎಸ್ಪಿ ಲೋಕೇಶ ಜೆ., ಪಿಐ ನಾಗಯ್ಯ ಕಾಡದೇವರಮಠ, ಸಿಪಿಐ ಎನ್. ವೆಂಕಟೇಶ, ಸಿದ್ದೇಶ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net