ರಟ್ಟಿಹಳ್ಳಿ ಪಪಂ ಸಿಬ್ಬಂದಿಗಿಲ್ಲ ಸೇವಾಭದ್ರತೆ job security

ಸೇವಾ ಭದ್ರತೆಗೆ ಒತ್ತಾಯಿಸಿ ರಟ್ಟಿಹಳ್ಳಿ ಪಪಂ ಸಿಬ್ಬಂದಿ ಮತ್ತು ಪೌರಕಾರ್ವಿುಕರ ಪ್ರತಿಭಟನೆ.
ಸೇವಾ ಭದ್ರತೆಗೆ ಒತ್ತಾಯಿಸಿ ರಟ್ಟಿಹಳ್ಳಿ ಪಪಂ ಸಿಬ್ಬಂದಿ ಮತ್ತು ಪೌರಕಾರ್ವಿುಕರ ಪ್ರತಿಭಟನೆ.
Published on
ರಟ್ಟಿಹಳ್ಳಿ: ಸ್ಥಳೀಯ ಪಟ್ಟಣ ಪಂಚಾಯಿತಿ 26 ಸಿಬ್ಬಂದಿ ಪೌರಸೇವಾ ವೃಂದದಲ್ಲಿ ವಿಲೀನ ಪ್ರಸ್ತಾವನೆಯನ್ನು ಆರ್ಥಿಕ ಹೊರೆಯ ನೆಪ ಹೇಳಿ ಹಣಕಾಸು ಇಲಾಖೆ ತಿರಸ್ಕರಿಸಿದೆ. ಇದರಿಂದಾಗಿ ಈ ಸಿಬ್ಬಂದಿ ಸೇವಾ ಭದ್ರತೆಯಿಲ್ಲದೆ (job security) ಕೆಲಸ ಮಾಡುವಂತಾಗಿದೆ.
ರಟ್ಟಿಹಳ್ಳಿ ಗ್ರಾಮ ಪಂಚಾಯಿತಿಯನ್ನು ಸರ್ಕಾರ 2020ರಲ್ಲಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಿತು. ಗ್ರಾಪಂನಲ್ಲಿ ಠರಾವಿನ ಮೂಲಕ ನೇಮಕಗೊಂಡಿದ್ದ ಒಟ್ಟು 32 ಸಿಬ್ಬಂದಿ ಪೈಕಿ 6 ಜನರನ್ನು 2021ರಲ್ಲಿ ಪೌರವೃಂದದಲ್ಲಿ ವಿಲೀನಗೊಳಿಸಿ ಆದೇಶ ಮಾಡಿದ ಸರ್ಕಾರ, ಉಳಿದ 26 ಸಿಬ್ಬಂದಿಯನ್ನು ಕೈಬಿಟ್ಟಿದೆ. ಸದ್ಯ 23 ಸಿಬ್ಬಂದಿಯಲ್ಲಿ ಮೂವರು ಸೇವಾಭದ್ರತೆ ಇಲ್ಲದೆ ಮಾನಸಿಕವಾಗಿ ಕುಗ್ಗಿ ಮರಣ ಹೊಂದಿದ್ದಾರೆ. ಇಂತಹವರ ಕುಟುಂಬಸ್ಥರಿಗೆ ಅನುಕಂಪ ಆಧಾರಿತ ನೌಕರಿಯೂ ಇಲ್ಲ, ಪರಿಹಾರವು ಇಲ್ಲದಾಗಿದೆ.
ಮೇಲ್ದರ್ಜೆಗೇರಿದ ಬಳಿಕ ಪಟ್ಟಣ ಪಂಚಾಯಿತಿಗೆ ಮುಖ್ಯಾಧಿಕಾರಿ (ಗ್ರೇಡ್- 2) ಹುದ್ದೆ 1, ಕಿರಿಯ ಇಂಜಿನಿಯರ್ 1, ಪ್ರಥಮ ದರ್ಜೆ ಸಹಾಯಕ 1, ಸಮುದಾಯ ಸಂಘಟನಾ ವ್ಯವಹಾರ ಅಧಿಕಾರಿ 1, ಪ್ರಥಮ ದರ್ಜೆ ಕಂದಾಯ ನಿರೀಕ್ಷಕ 1, ನೀರು ಸರಬರಾಜು ನಿಯಂತ್ರಕ 1, ಡಾಟಾ ಎಂಟ್ರಿ ಆಪರೇಟರ್ 1, ಕಿರಿಯ ಆರೋಗ್ಯ ನಿರೀಕ್ಷಕ 1, ಸಮುದಾಯ ಸಂಘಟಕ 1, ದ್ವಿತೀಯ ದರ್ಜೆ ಸಹಾಯಕ 3, ಕರ ವಸೂಲಿಗಾರರು 1, ವಾಹನ ಚಾಲಕ 1, ಅಸಿಸ್ಟ್ಟಟ್ ವಾಟರ್ ಸಪ್ಲೈ ಆಪರೇಟರ್ 1, ಸ್ಯಾನಿಟರಿ ಸೂಪರವೈಸರ್ 1, ಸೀನಿಯರ್ ವಾಲ್ವಮನ್ 1, ಪೌರ ಕಾರ್ವಿುಕರು 15, ಅಟೆಂಡರ್ಸ್ 1, ಲೋಡರ್ಸ್ 4, ಹೆಲ್ಪರ್ ನೀರು ಸರಬರಾಜು ವಾಲ್ವಮನ್ 3 ಸೇರಿದಂತೆ 40 ಹುದ್ದೆ ಮಂಜೂರಾಗಿವೆ. ಇದರಲ್ಲಿ 10 ಹುದ್ದೆಗಳಿಗೆ ಮಾತ್ರ ನೇಮಕಾತಿಯಾಗಿದ್ದು, 30 ಹುದ್ದೆ ಖಾಲಿ ಇವೆ. ಖಾಲಿಯಿರುವ ಈ ಹುದ್ದೆಗಳಿಗೆ ಚ್ಯುತಿ ಆಗದಂತೆ ಕರ್ತವ್ಯನಿರತ ಸಿಬ್ಬಂದಿ ನಿಯೋಜಿಸಿ, ಪೌರವೃಂದಕ್ಕೆ ವಿಲೀನಗೊಳಿಸಬೇಕು ಎಂಬುದು ಸಿಬ್ಬಂದಿ ಬಹುವರ್ಷಗಳ ಬೇಡಿಕೆ.
ಪಪಂನಿಂದ ಎಲ್ಲ ಸಿಬ್ಬಂದಿಗೆ ವಾರ್ಷಿಕವಾಗಿ 52 ಲಕ್ಷ ರೂಪಾಯಿ ವೇತನವನ್ನು ಸಾಮಾನ್ಯ ನಿಧಿಯಿಂದ ನೀಡಬೇಕಾಗಿದೆ. ಈ ಸಿಬ್ಬಂದಿ ಕಾಯಂಗೊಳಿಸಿದರೆ, ವೇತನ ಸರ್ಕಾರದಿಂದ ಪಾವತಿಯಾಗಲಿದೆ. ಸಾಮಾನ್ಯ ನಿಧಿ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಾಗಿದೆ.
ಮಲತಾಯಿ ಧೋರಣೆ: ಜಿಲ್ಲೆಯ ಗುತ್ತಲ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಹೆಚ್ಚುವರಿ ನೌಕರರನ್ನು ಪೌರಸೇವಾ ವೃಂದದಲ್ಲಿ ವಿಲೀನಗೊಳಿಸಲಾಗಿದೆ. ಆದರೆ, ಸರ್ಕಾರ ರಟ್ಟಿಹಳ್ಳಿ ಪಪಂ ಸಿಬ್ಬಂದಿ ಮತ್ತು ಪೌರಕಾರ್ವಿುಕರನ್ನು ಪೌರಸೇವಾ ವೃಂದದಲ್ಲಿ ವಿಲೀನಗೊಳಿಸಲು ಹಿಂದೇಟು ಹಾಕುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಶಾಸಕ ಯು.ಬಿ. ಬಣಕಾರ, ನಗರಾಭಿವೃದ್ಧಿ ಇಲಾಖೆಯ ಜಿಲ್ಲಾ ಯೋಜನಾ ನಿರ್ದೇಶಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೂಡಲೇ ನಮ್ಮ ಸೇವೆ ಪೌರಸೇವಾ ವೃಂದಲ್ಲಿ ವಿಲೀನವಾಗಬೇಕು ಎಂಬುದು ಸಿಬ್ಬಂದಿ ಒತ್ತಾಯವಾಗಿದೆ.

ಪಟ್ಟಣ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿದ್ದು, ಸೇವಾ ಭದ್ರತೆ ಮತ್ತು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಸದ್ಯದ ವೇತನದಲ್ಲಿ ಜೀವನ ನಡೆಸುವುದು ದುಸ್ತರವಾಗಿದೆ. ಸರ್ಕಾರ ಶೀಘ್ರವೇ ನಮ್ಮ ಸೇವೆಯನ್ನು ಪೌರಸೇವಾ ವೃಂದಕ್ಕೆ ವಿಲೀನಗೊಳಿಸಲಿ.

| ಸಂತೋಷ ಬಿಳಚಿ, ಪಪಂ ಸಿಬ್ಬಂದಿ ರಟ್ಟಿಹಳ್ಳಿ.

"

ರಟ್ಟಿಹಳ್ಳಿ ಪಪಂ ಸಿಬ್ಬಂದಿ ಬೇಡಿಕೆ ಸರ್ಕಾರದ ಹಂತದಲ್ಲಿದ್ದು, ಅದರ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲು ಪ್ರಸ್ತಾವನೆ ಕಳುಹಿಸಲಾಗುವುದು.

| ಚಂದ್ರಪ್ಪ ಸಿ. ಯೋಜನಾ ನಿರ್ದೇಶಕ , ಜಿಲ್ಲಾ ನಗರಾಭಿವೃದ್ಧಿ ಕೋಶ ಹಾವೇರಿ.

"

ಕಳೆದ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ವಿುಕರು ಮತ್ತು ಸಿಬ್ಬಂದಿಯನ್ನು ಸರ್ಕಾರ ಶೀಘ್ರವೇ ಕಾಯಂಗೊಳಿಸಿ ಸೇವಾ ಭದ್ರತೆ ನೀಡಬೇಕಾಗಿದೆ.

| ರವೀಂದ್ರ ಮುದಿಯಪ್ಪನವರ, ಪಪಂ ಅಧ್ಯಕ್ಷ ರಟ್ಟಿಹಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net