ಪರಿಶುದ್ಧ ಬದುಕಿನಿಂದ ಜನ್ಮ ಉಜ್ವಲ Rambhapuri Sri

Rambhapuri Sri ಹಾನಗಲ್ಲ ತಾಲೂಕಿನ ಶಂಕರಿಕೊಪ್ಪದಲ್ಲಿ ಬಾಳೇಹೊನ್ನೂರು ರಂಭಾಪುರಿ ಪೀಠದ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದ ವಿಜೃಂಭಣೆಯಿಂದ ಜರುಗಿತು. ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
Rambhapuri Sri ಹಾನಗಲ್ಲ ತಾಲೂಕಿನ ಶಂಕರಿಕೊಪ್ಪದಲ್ಲಿ ಬಾಳೇಹೊನ್ನೂರು ರಂಭಾಪುರಿ ಪೀಠದ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವದ ವಿಜೃಂಭಣೆಯಿಂದ ಜರುಗಿತು. ವಿವಿಧ ಮಠಾಧೀಶರು ಉಪಸ್ಥಿತರಿದ್ದರು.
Published on
ಹಾನಗಲ್ಲ: ಹಿಂದಿನ ಬಹು ಜನ್ಮಗಳ ಪುಣ್ಯದ ಲದಿಂದ ಮಾನವ ಜನ್ಮ ಪ್ರಾಪ್ತವಾಗುತ್ತದೆ. ಒಳ್ಳೆಯದು-ಕೆಟ್ಟದು ಎರಡೂ ಗುಣಗಳು ಮನುಷ್ಯನಲ್ಲಿವೆ. ಆದರೆ, ಪರಿಶುದ್ಧವಾದ ಬದುಕಿನಿಂದ ಮಾತ್ರ ಮಾನವ ಜನ್ಮ ಉಜ್ವಲಗೊಳ್ಳುತ್ತದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. 
ತಾಲೂಕಿನ ಶಂಕರಿಕೊಪ್ಪ ಗ್ರಾಮದಲ್ಲಿ ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಈಶ ನಿರ್ಮಿತವಾದ ಈ ಪ್ರಪಂಚದಲ್ಲಿ ಏನೆಲ್ಲ ಅದ್ಭುತ ಶಕ್ತಿಯಿದೆ. ಅದನ್ನು ಅರಿತು ಬಾಳುವ ಮನಸು ಮನುಷ್ಯನಿಗೆ ಇರಬೇಕಾಗುತ್ತದೆ. ಮನುಷ್ಯ ದೇವರು, ಧರ್ಮ ಮತ್ತು ಗುರುವನ್ನು ಆಶ್ರಯಿಸಿ ಬದುಕನ್ನು ಕಟ್ಟಿಕೊಳ್ಳಬೇಕು. ಎಲ್ಲರೂ ನಮ್ಮವರು ಎಂಬ ಉದಾತ್ತ ನಿಲುವು ಬೆಳೆಸಿಕೊಳ್ಳಬೇಕಿದೆ. ಆಧುನಿಕ ಕಾಲಘಟ್ಟದಲ್ಲಿ ಸ್ವಾರ್ಥ ಮತ್ತು ಸಂಕುಚಿತ ಮನೋಭಾವನೆ ಬೆಳೆದು ಮನುಷ್ಯನ ಬದುಕು ತೊಳಲಾಟದಲ್ಲಿದೆ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಅಜ್ಞಾನವೆಂಬ ಕತ್ತಲೆ ಕಳೆಯಲು ಗುರುವೊಬ್ಬನೇ ಸಮರ್ಥ. ಹೀಗಾಗಿ ಎಲ್ಲ ಕಾಲಘಟ್ಟದಲ್ಲಿಯೂ ಗುರು ಆಶ್ರಯಿಸಿ ಬಹಳಷ್ಟು ಜನ ಬದುಕು ಕಟ್ಟಿಕೊಂಡಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ದರ್ಶನದ ಮಾನವೀಯ ಮೌಲ್ಯಗಳನ್ನು ಬೋಧಿಸಿ ಭಕ್ತರನ್ನು ಉದ್ಧರಿಸಿದ್ದಾರೆ ಎಂದರು.
ಸಾಮರಸ್ಯ ಸಾರಿದ ಪಂಪಪೀಠಗಳು:
ಶಾಸಕ ಶ್ರೀನಿವಾಸ ಮಾನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಂಚ ಪೀಠಗಳು ಶತ, ಶತಮಾನಗಳಿಂದ ಶಾಂತಿ, ಸಮಾನತೆ, ಸಾಮರಸ್ಯ ಮತ್ತು ಸೌಹಾರ್ದತೆಯ ಸಂದೇಶ ಸಾರಿವೆ. ಪಂಚಪೀಠಗಳು ಜ್ಞಾನ, ಭಕ್ತಿ ಮತ್ತು ಸೇವಾ ಪರಂಪರೆಯ ಜೀವಂತ ಸಂಕೇತವಾಗಿವೆ. ಸಾಮಾಜಿಕ ಸುಧಾರಣೆಯಲ್ಲಿ ಪಂಚಪೀಠಾಧೀಶ್ವರರ ಕೊಡುಗೆ ಅಪಾರ. ಅನ್ನದಾನ, ಆಶ್ರಯದಾನ, ಶಿಕ್ಷಣದಾನ ಇತ್ಯಾದಿ ಚಟುವಟಿಕೆಗಳು ಅನುಕರಣೀಯವಾಗಿವೆ. ವಚನ ಸಾಹಿತ್ಯ, ಶರಣ ಸಂಪ್ರದಾಯ, ತತ್ವಶಾಸ ಉಳಿಸಿ, ಬೆಳೆಸಿದ ಶ್ರೇಯಸ್ಸೂ  ಪೀಠಗಳಿಗೆ ಸಲ್ಲಬೇಕಿದೆ ಎಂದರು.
ಕವಲೇದುರ್ಗ ಭುವನಗಿರಿ ಮಠದ ಮರುಳಸಿದ್ಧ ಶಿವಾಚಾರ್ಯರು, ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ರಟ್ಟಿಹಳ್ಳಿ ಶಿವಲಿಂಗ ಶಿವಾಚಾರ್ಯರು, ಸಾಲೂರು ಗುರುಲಿಂಗ ಜಂಗಮ ಶಿವಾಚಾರ್ಯರು, ನೆಗಳೂರಿನ ಗುರುಶಾಂತೇಶ್ವರ ಶಿವಾಚಾರ್ಯರು, ಕಡೇನಂದಿಹಳ್ಳಿ ಅಭಿನವರುದ್ರ ಮಲ್ಲಿಕಾರ್ಜುನ ಶಿವಾಚಾರ್ಯರು, ತಿಳವಳ್ಳಿಯ ನಿರಂಜನ ಸ್ವಾಮಿಗಳು ಮಾತನಾಡಿದರು. ಶ್ರೀಮಠದ ಭಕ್ತರಾದ ಶೇಖರಯ್ಯ-ನೀಲಾಂಬಿಕಾ ಮತ್ತು ಮಂಜುನಾಥ-ಪೂಜಾ ಗೃಹಸ್ಥಾಶ್ರಮ ಸ್ವೀಕರಿಸಿದರು. 
ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಪಂ ಮಾಜಿ ಸದಸ್ಯ ಮಾಲತೇಶ ಸೊಪ್ಪಿನ, ಭರಮಣ್ಣ ಶಿವೂರ, ಕರಬಸಪ್ಪ ಶಿವೂರ, ನಿಂಗಪ್ಪ ಪೂಜಾರ, ಸಿದ್ದಲಿಂಗಪ್ಪ ಶಂಕರಿಕೊಪ್ಪ, ಶೇಖರಯ್ಯ ಮಠದ, ಮಂಜುನಾಥ ಮಠದ ಇದ್ದರು. ಸವಣೂರಿನ ಡಾ.ಗುರುಪಾದಯ್ಯ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net