ಮಳೆಗೆ ಜಲಾವೃತಗೊಂಡ ದುರ್ಗಾ ಸರ್ಕಲ್; ನಗರಸಭೆ ವಿರುದ್ಧ ಜನರ ಆಕ್ರೋಶ

ಜಲಾವೃತಗೊಂಡ ವೃತ್ತ
ಜಲಾವೃತಗೊಂಡ ವೃತ್ತ
Published on

ರಾಣೆಬೆನ್ನೂರು: ನಗರ ಸೇರಿ ತಾಲೂಕಿನಾದ್ಯಂತ ಭಾನುವಾರ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಸಂಜೆ 4 ಗಂಟೆಗೆ ಬಿರುಗಾಳಿ ಸಮೇತ ಆರಂಭಗೊಂಡ ಮಳೆ ನಾಲ್ಕು ಗಂಟೆಗಳ ಕಾಲ ಸುರಿಯಿತು. ಇದರಿಂದ ನಗರದ ಗಟಾರು, ಚರಂಡಿಗಳು ತುಂಬಿ ಮಳೆ ನೀರು ರಸ್ತೆ ಮೇಲೆ ಹರಿಯಿತು.

ಕೆರೆಯಂತಾದ ದುರ್ಗಾ ವೃತ್ತ...

ನಗರದ ನೆಹರು ಮಾರುಕಟ್ಟೆ ಬಳಿಯ ದುರ್ಗಾ ವೃತ್ತ ಮಳೆಯಿಂದಾಗಿ ಅಕ್ಷರಸಹ ಕೆರೆಯಂತಾಗಿದೆ. ಮಳೆ ಹಾಗೂ ಚರಂಡಿ ನೀರು ದುರ್ಗಾ ವೃತ್ತ ಆವರಿಸಿಕೊಂಡಿದ್ದು ಕೆಲಕಾಲ ವಾಹನ ಸಂಚಾರ ಸಹ ಸ್ಥಗಿತಗೊಂಡಿತ್ತು.

ಮಳೆ ನೀರು ಏಕಾಏಕಿ ರಸ್ತೆ ಮೇಲೆ ಹರಿದ ಪರಿಣಾಮ ಬೀದಿ ಬದಿ ನೆಲದ ಮೇಲೆ ಹಚ್ಚಿದ ಹಣ್ಣುಗಳು, ತರಕಾರಿ ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ಬೀದಿ ಬದಿ ವ್ಯಾಪಾರಸ್ಥರು ಪರದಾಡುವಂತಾಯಿತು.

ಅಲ್ಲದೆ ದುರ್ಗಾ ವೃತ್ತ ಮತ್ತು ಗುತ್ತಲ ರಸ್ತೆಯ ಚಿನ್ನಾಭರಣದ ಅಂಗಡಿಗಳಿಗೆ ಚರಂಡಿ ನೀರು ನುಗ್ಗಿ ವ್ಯಾಪಾರಸ್ಥರು ಪರದಾಡಿದರು. ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ನಮಗೆ ಈ ದುಸ್ಥಿತಿ ಎದುರಾಗಿದೆ ಎಂದು ನಗರಸಭೆ ಹಾಗೂ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ಚರಂಡಿಗಳು ಮುಚ್ಚಿ ಹೋಗಿವೆ. ಪ್ರಮುಖವಾಗಿ ರಾಜ ಕಾಲುವೆ ಅತಿಕ್ರಮಣವಾಗಿದೆ. ಇದರ ಪರಿಣಾಮ ಮಳೆ ಬಂದಾಗ ನಗರದ ಮಧ್ಯೆ ಭಾಗ ಕೆರೆಯಂತಾಗುತ್ತಿದೆ. ಆದ್ದರಿಂದ ನಗರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net