ಭಾರಿ ಮಳೆಗೆ ನಲುಗಿದ ಗ್ರಾಮೀಣರು; ಕುರಿ ಸಾವು, ಕುಸಿದು ಬಿದ್ದ ಮನೆಗಳು

ಮನೆ ಬಿದ್ದಿರುವುದು
ಮನೆ ಬಿದ್ದಿರುವುದು
Published on

ರಾಣೆಬೆನ್ನೂರು: ನಗರ ಸೇರಿ ತಾಲೂಕಿನಾದ್ಯಂತ ರಾತ್ರಿ ಸುರಿದ ಬಿರುಗಾಳಿ ಸಮೇತ ಭಾರಿ ಮಳೆಗೆ ಗ್ರಾಮೀಣ ಭಾಗದಲ್ಲಿ ಮನೆ, ವಿದ್ಯುತ್ ಕಂಬಗಳು ಬಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ.

ಸಂಜೆ 4 ಗಂಟೆಯಿಂದ ಆರಂಭಗೊಂಡ ಮಳೆ ನಿರಂತರವಾಗಿ ರಾತ್ರಿ 9 ಗಂಟೆಯವರೆಗೂ ಸುರಿದಿದೆ. ಇದರಿಂದ ನಗರದಲ್ಲಿ ಚರಂಡಿಗಳು ತುಂಬಿ ನೀರು ರಸ್ತೆ ಮೇಲೆಯೇ ಹರಿಯಿತು. ತರಕಾರಿ ಮಾರುಕಟ್ಟೆಯಲ್ಲಿ ನೀರು ನುಗ್ಗಿ ತರಕಾರಿ ಚರಂಡಿ ಪಾಲಾಗಿದೆ. ಗ್ರಾಮೀಣ ಭಾಗದಲ್ಲಿ ಬಿರುಗಾಳಿಗೆ ಹಲವರ ಮನೆ ತಗಡುಗಳು ಹಾರಿ ಹೋಗಿವೆ.

ತಾಲೂಕಿನ ಅರೇಮಲ್ಲಾಪುರ, ಹಲಗೇರಿ, ಸೋಮಲಾಪುರ, ರಾಹುತನಕಟ್ಟಿ, ಹಿರೇಬಿದರಿ, ಕೋಣತಂಬಗಿ, ಸುಣಕಲ್ಲಬಿದರಿ, ಗುಡ್ಡದಬೇವಿನಹಳ್ಳಿ, ಜೋಯಿಸರಹರಳಹಳ್ಳಿ, ಮೇಡ್ಲೇರಿ ಸೇರಿ ಸುತ್ತಲಿನ ಗ್ರಾಮಗಳನ್ನು 20ಕ್ಕೂ ಅಧಿಕ ಮನೆಗಳ ಮೇಲ್ಛಾವಣಿಗೆ ಹಾಕಿದ್ದ ತಗಡುಗಳು ಗಾಳಿ ರಭಸಕ್ಕೆ ಹಾರಿ ಹೋಗಿವೆ. ಇದರಿಂದ ಮನೆಯಲ್ಲಿ ಆಹಾರ ಪದಾರ್ಥ, ಬಟ್ಟೆ ಹಾಗೂ ಹಾಸಿಗೆಗಳು ನೀರು ಪಾಲಾಗಿದ್ದು, ಅಲ್ಲಿನ ನಿವಾಸಿಗಳು ರಾತ್ರಿಯಿಡಿ ಮಳೆಯಿಂದ ರಸಿಕೊಳ್ಳಲು ಪರದಾಡಬೇಕಾಯಿತು.

ಸೋಮಲಾಪುರ ಗ್ರಾಮದ ಮಂಜಪ್ಪ ಹಳ್ಳೇರ ಎಂಬುವರ ಜಮೀನಿನಲ್ಲಿ ವಿದ್ಯುತ್ ಕಂಬ ಕುರಿಯ ಮೇಲೆ ಬಿದ್ದು ಒಂದು ಕುರಿ ಮೃತಪಟ್ಟಿದೆ. ಮೇಡ್ಲೇರಿ ಗ್ರಾಮದಲ್ಲಿ ಐದು ಮನೆಗಳ ಮೇಲೆ ವಿದ್ಯುತ್ ಕಂಬ ಮುರಿದು ಬಿದ್ದು ಮನೆಗಳಿವೆ ಹಾನಿಯಾಗಿದೆ. ಗುಡ್ಡದಬೇವಿನಹಳ್ಳಿ ಗ್ರಾಮದ ಬಸವಂತಪ್ಪ ಮತ್ತಿಹಳ್ಳಿ ಎಂಬುವರ ಜಾನುವಾರು ಕೊಟ್ಟಿಗೆ ಮೇಲ್ಛಾವಣಿ ಹಾರಿ ಹೋಗಿವೆ.

ಕಣ್ಣೀರು ಹಾಕುತ್ತಿರುವ ಭತ್ತ ಬೆಳೆಗಾರರು...

ತಾಲೂಕಿನ ಮೇಡ್ಲೇರಿ, ಹಿರೇಬಿದರಿ, ಚೌಡಯ್ಯದಾನಪುರ, ಹರನಗಿರಿ, ಬೇಲೂರು, ಹೊಳೆಆನ್ವೇರಿ ಸೇರಿ ತುಂಗಭದ್ರಾ ನದಿಪಾತ್ರದ ರೈತರು ಬೇಸಿಗೆಯಲ್ಲಿ ತುಂಗಭದ್ರಾ ನದಿ ನೀರು ಬಳಸಿಕೊಂಡು ಭತ್ತ ನಾಟಿ ಮಾಡಿದ್ದರು. ಭತ್ತವಿಗ ತೆನೆಕಟ್ಟಿ ನಿಂತಿತ್ತು. ಇನ್ನೇನು ರೈತರು ಕಟಾವು ಮಾಡಬೇಕಿತ್ತು. ಆದರೆ, ಗುರುವಾರ ರಾತ್ರಿ ಸುರಿದ ಭಾರಿ ಮಳೆ ಗಾಳಿಗೆ ಭತ್ತದ ತೆನೆ ನೆಲಕಚ್ಚಿವೆ. ಇದರಿಂದ ಭತ್ತ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಆದ್ದರಿಂದ ಕೃಷಿ ಅಧಿಕಾರಿಗಳು ಭತ್ತದ ಗದ್ದೆಗಳಿವೆ ಭೇಟಿ ನೀಡಿ ಪರಿಶೀಲಿಸಬೇಕು. ಹಾನಿಯಾದ ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಬೇಕು ಎಂದು ಭತ್ತ ಬೆಳೆಗಾರ ಬಸನಗೌಡ ಸೇರಿ ಇತರರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net