ಮಳೆಯಿಂದ ಹಾನಿಯಾದ ಬೆಳೆಗೆ ಸೂಕ್ತ ಪರಿಹಾರ ಕೊಡಿ; ಸಂತೋಷಕುಮಾರ ಆಗ್ರಹ

ಸುದ್ದಿಗೋಷ್ಠಿ
ಸುದ್ದಿಗೋಷ್ಠಿ
Published on

ರಾಣೆಬೆನ್ನೂರು: ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದ ತಾಲೂಕಿನ ಮೆಡ್ಲೇರಿ ಹೋಬಳಿಯ ಭತ್ತ, ತೆಂಗು ಹಾಗೂ ಅಡಕೆ ಬೆಳೆಗಳು ಭಾರಿ ಹಾನಿಗೊಳಗಾದ ಹಿನ್ನೆಲೆಯಲ್ಲಿ ರೈತರಿಗೆ ತಕ್ಷಣ ಪರಿಹಾರ ನೀಡುವಂತೆ ಮನವಿ ಮಾಡಿದರೂ ಜಿಲ್ಲಾಡಳಿತ ಹಾಗೂ ಸರ್ಕಾರದಿಂದ ಈವರೆಗೆ ಸಮರ್ಪಕ ಸ್ಪಂದನೆ ಸಿಕ್ಕಿಲ್ಲವೆಂದು ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟಾವಿಗೆ ಸಿದ್ಧವಾಗಿದ್ದ ಸಾವಿರಾರು ಎಕರೆ ಭತ್ತ ಬೆಳೆ ಸಂರ್ಪೂಣ ನಾಶವಾಗಿದೆ. ನೂರಾರು ಎಕರೆಯಷ್ಟು ಅಡಕೆ ಹಾಗೂ ತೆಂಗು ಬೆಳೆ ಕೈಗೆ ಸಿಗದಂತಾಗಿದೆ. ರೈತರು ಎಕರೆಗೆ ಸುಮಾರು 40 ಸಾವಿರ ರೂ. ವೆಚ್ಚ ಮಾಡಿದ್ದಾರೆ. ಈ ಮೊತ್ತವನ್ನು ಮುಂಗಡ ಪರಿಹಾರವಾಗಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ದೊರಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂಗಾರು ಹಂಗಾಮು ಆರಂಭವಾಗಿರುವುದರಿಂದ ರೈತರಿಗೆ ತಕ್ಷಣ ಹಣದ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರನ್ನು ನಿರ್ಲಕ್ಷಿಸುವುದು ಸರಿಯಲ್ಲ. ಈ ತಿಂಗಳ ಅಂತ್ಯದೊಳಗೆ ಪರಿಹಾರ ಹಣವನ್ನು ರೈತರ ಖಾತೆಗೆ ಜಮಾ ಮಾಡದಿದ್ದರೆ ಜೂ. 30ರಂದು ಬಿಜೆಪಿ ಕಚೇರಿಯಲ್ಲಿ ಸಾವಿರಾರು ರೈತರೊಂದಿಗೆ ಸರ್ಕಾರದ ಪುಣ್ಯತಿಥಿ ನೆರವೇರಿಸಲಾಗುವುದು ಎಂದು ಎಚ್ಚರಿಸಿದರು.

ನಗರದ ಹೊರವಲಯದ ಕೂನಬೇವು ಪ್ಲಾಟ್ ಬಳಿಯ ಗದಗ&ಹೊನ್ನಾಳ್ಳಿ ರಾಜ್ಯ ಹೆದ್ದಾರಿ ಅಂಡರ ಬ್ರಿಡ್ಜ್ ಮಳೆ ನೀರು ತುಂಬಿಕೊಂಡು ಸುತ್ತಮುತ್ತಲಿನ ಹೊಲಗಳಿಗೆ ನೀರು ತುಂಬಿ ರೈತರು ಬಿತ್ತನೆ ಮಾಡಿದ ಬೆಳೆ ಹಾಳಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದರು.

ಪ್ರಮುಖರಾದ ಪ್ರಭುಗೌಡ ಚನ್ನಗೌಡ, ಹನುಮಂತರಾಜ ಚನ್ನಗೌಡ್ರ, ಯುವರಾಜ ಬಾರಟಕ್ಕಿ, ಚಂದ್ರಪ್ಪ ಭತ್ತದ, ವಿಜಯಕುಮಾರ ಜ್ಯೋತಿ, ಬಸವರಾಜ ಬಣಕಾರ, ಗುಡ್ಡೇಶ ನಿಟ್ಟೂರು, ಮಲ್ಲನಗೌಡ ನರಸಗೊಂಡರ, ಬಸವನಗೌಡ ಪಾಟೀಲ, ರಾಜೇಂದ್ರ ಜಂಬಗಿ, ದೇವೇಂದಣ್ಣ ಉಜ್ಜನಗೌಡ್ರ, ವಿಜಯಕುಮಾರ ಹೆಡಿಯಾಲ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net