

ರಾಣೆಬೆನ್ನೂರು: ಮಳೆಯಿಂದ ಹಾನಿಯಾದ ಭತ್ತ ಬೆಳೆಗಾರರಿಗೆ ಮುಂದಿನ 15 ದಿನದಲ್ಲಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಭರವಸೆ ನೀಡಿದರು.
ತಾಲೂಕಿನ ಹಿರೇಬಿದರಿ ಗ್ರಾಮದಲ್ಲಿ ಆಲಿಕಲ್ಲು ಮಳೆಯಿಂದ ಹಾನಿಯಾದ ಭತ್ತ, ಅಡಿಕೆ ಬೆಳೆಗಳ ಜಮೀನುಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಅವರು ರೈತರ ಅಹವಾಲು ಆಲಿಸಿದರು. ಮಳೆಯಿಂದ ಹಾನಿಯಾಗಿರುವ ಬೆಳೆಗಳ ಮಾಹಿತಿ ಕುರಿತು ಈಗಾಗಲೇ ನಮ್ಮ ಸಿಬ್ಬಂದಿಯಿಂದ ಸರ್ವೇ ಮಾಡಿಸಲಾಗಿದ್ದು, ಕೂಡಲೇ ಸರ್ಕಾರಕ್ಕೆ ವರದಿ ಸಲ್ಲಿಸಿ ಎನ್ಡಿಆರ್ಎ್ ಮತ್ತು ಎಸ್ಡಿಆರ್ಎ್ ಮಾನದಂಡದ ಪ್ರಕಾರ 15 ದಿನದಲ್ಲಿ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಮೇ 18ರವರೆಗೆ 36.10 ಮೀ.ಮೀ. ವಾಡಿಕೆ ಮಳೆಯಿದ್ದರೆ 57.90 ಮೀ.ಮೀ. ಮಳೆಬಿದ್ದಿದೆ. ಮಳೆ ಪ್ರಮಾಣ ಹೆಚ್ಚಿಗೆ ಆಗಿರುವ ಕಾರಣ ಮತ್ತು ಜೋರಾದ ಗಾಳಿಯಿಂದಾಗಿ ಸಾರ್ವಜನಿಕರ ಆಸ್ತಿಗೆ ಹಾನಿಯಾಗಿದೆ. ರಾಣೆಬೆನ್ನೂರಿನಲ್ಲಿ 54 ಮನೆಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 127 ಮನೆಗಳಿಗೆ ಹಾನಿಯಾಗಿದೆ. ಸಂತ್ರಸ್ತರಿಗೆ ಆದಷ್ಟು ಬೇಗ ಪರಿಹಾರ ಒದಗಿಸಲು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ ಎಂದರು.
ಮಳೆಯಿಂದ ಸಿಡಿಲು ಬಡಿಗೆ ಒಬ್ಬರು ಮೃತಪಟ್ಟಿದ್ದರೆ, ಕೆರೆಯಲ್ಲಿ ಮುಳಗಿ ಇಬ್ಬರು ಬಾಲಕರು ಮೃತಪಟ್ಟಿದ್ದಾರೆ. ರಾಣೆಬೆನ್ನೂರ ಮತ್ತು ಹಿರೇಕೆರೂರಿನಲ್ಲಿ ಸಿಡಿಲು ಬಡಿದು ಒಂದು ಎತ್ತು, ಒಂದು ಆಕಳು, 6 ಕುರಿಗಳು, ಒಂದು ಮೇಕೆ ಸಾವನ್ನಪ್ಪಿವೆ. 1,182 ಹೆಕ್ಟೇರ್ ಕೃಷಿ ಬೆಳೆ ಹಾಗೂ 54.79 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 1,235 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ. ಇದರ ಅಂದಾಜು ಮೌಲ್ಯ 20.14 ಕೋಟಿ ರೂ. ಆಗಲಿದೆ. ಇದರ ಜತೆಗೆ 4 ಅಂಗನವಾಡಿ ಕಟ್ಟಡಗಳು, 1008 ವಿದ್ಯುತ್ ಕಂಬಗಳು, 4 ವಿದ್ಯುತ್ ಟ್ರಾನ್ಸ್ಾರ್ಮರ್ಗಳು, 8 ಕಡೆ ವಿದ್ಯುತ್ ಹೈಟೆನ್ಯನ್ ಟವರ್ಗಳು ಹಾನಿಯಾಗಿವೆ. ಈ ಕುರಿತು ಪ್ರಾಥಮಿಕ ವರದಿ ಆಧರಿಸಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದು ತಿಳಿಸಿದರು.
ಶಾಸಕ ಪ್ರಕಾಶ ಕೋಳಿವಾಡ, ತಹಸೀಲ್ದಾರ್ ಆರ್.ಎಚ್. ಭಾಗವಾನ್, ತಾಪಂ ಇಒ ಡಾ. ವೆಂಕಟೇಶ ಸಣ್ಣಬಿದರಿ, ಕಂದಾಯ ನಿರೀಕ್ಷಕ ರುದ್ರೇಶ ಎ.ಸಿ., ಕೃಷಿ ಅಧಿಕಾರಿ ವೀರೇಶ, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಂಜ್ಯಾ ನಾಯ್ಕ ಮತ್ತಿತರರು ಇದ್ದರು.