

ರಾಣೆಬೆನ್ನೂರು: ರಾಜ ಕಾಲುವೆ ಒತ್ತುವರಿ, ಚರಂಡಿಗಳನ್ನು ಸ್ವಚ್ಛಗೊಳಿಸದ ಹಿನ್ನೆಲೆಯಲ್ಲಿ ಮಳೆ ಬಂದರೆ ಸಾಕು ವಾಣಿಜ್ಯ ನಗರಿ ರಾಣೆಬೆನ್ನೂರಿನ ಕೇಂದ್ರ ಸ್ಥಾನ ದುರ್ಗಾ ವೃತ್ತ ಸಂರ್ಪೂಣ ಜಲಾವೃತಗೊಂಡು ಕೆರೆಯಂತಾಗುತ್ತಿದೆ. ಇದರಿಂದ ಪರಿಣಾಮ ಬೀದಿ ಬದಿ ವ್ಯಾಪಾರಸ್ಥರು ನರಕಯಾತನೆ ಅನುಭವಿಸುವಂತಾಗಿದೆ.
ಮಳೆಗಾಲ ಆರಂಭಕ್ಕೂ ಮುನ್ನವೇ ನಗರಸಭೆಯವರು ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಬೇಕಿತ್ತು. ಆದರೆ, ಕಳೆದ ವಾರದಿಂದ ಭರ್ಜರಿಯಾಗಿ ಮಳೆ ಸುರಿಯಲಾರಂಭಿಸಿದರೂ ನಗರಸಭೆ ಅಧಿಕಾರಿಗಳು ಮಾತ್ರ ಇನ್ನೂ ಎಚ್ಚೆತ್ತುಕೊಂಡಂತಿಲ್ಲ. ಇದರಿಂದಾಗಿ ಮಳೆ ಬಂದಾಗ ನಗರದ ಪ್ರಮುಖ ಮುಖ್ಯ ರಸ್ತೆಯಾದ ಹಳೇ ಪಿ.ಬಿ. ರಸ್ತೆ, ದುರ್ಗಾ ವೃತ್ತ, ಗುತ್ತಲ ರಸ್ತೆ ಸೇರಿ ಇತರೆಡೆ ಚರಂಡಿಗಳಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯುವ ಪರಿಸ್ಥಿತಿ ಎದುರಾಗಿದ್ದು ರಸ್ತೆಗಳು ಕೆರೆಯಂತಾಗುತ್ತಿವೆ.
ನಗರಸಭೆ ಅಧಿಕಾರಿಗಳು ಸಮಸ್ಯೆ ಕುರಿತು ಗಮನ ಹರಿಸಿ ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.