ದಸ್ತು ಬರಹಗಾರರ ಧರಣಿ ಸುವರ್ಣ ಸೌಧಕ್ಕೆ ಶಿಫ್ಟ್

ಪ್ರತಿಭಟನೆ
ಪ್ರತಿಭಟನೆ
Published on

ರಾಣೆಬೆನ್ನೂರ: ಹೊರ ರಾಜ್ಯಗಳಲ್ಲಿ ಇರುವಂತೆ ನಮ್ಮ ರಾಜ್ಯದಲ್ಲೂ ಕೂಡ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ಕೊಡುವುದು ಸೇರಿ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕು ಮುದ್ರಾಂಕ ಮಾರಾಟಗಾರರ ಹಾಗೂ ದಸ್ತು ಬರಹಗಾರರ ಸಂದ ವತಿಯಿಂದ ನಗರದ ಮಿನಿ ವಿಧಾನಸೌಧ ಎದುರು ಕಳೆದ 5 ದಿನದಿಂದ ಧರಣಿ ನಡೆಸಿದ ಪ್ರತಿಭಟನಾಕಾರರು ಮಂಗಳವಾರದಿಂದ ಬೆಳಗಾವಿ ಸುವರ್ಣ ಸೌಧದ ಎದುರು ಧರಣಿ ನಡೆಸಲಿದ್ದಾರೆ.

ಸಂದ ತಾಲೂಕು ಅಧ್ಯಕ್ಷ ಬಸವರಾಜ ಲಕ್ಷ್ಮೇಶ್ವರ ಮಾತನಾಡಿ, ಕಾವೇರಿ 2.0 ತಂತ್ರಾಂಶದಲ್ಲಿ ಬಹಳಷ್ಟು ನೂನ್ಯತೆಗಳಿವೆ. ಅವುಗಳನ್ನು ಸರಿಪಡಿಸಬೇಕು. ನೋಂದಣಿ ಆಗುವ ಎಲ್ಲ ದಸ್ತಾವೇಜುಗಳಿಗೆ ಕಡ್ಡಾಯವಾಗಿ ಪತ್ರ ಬರಹಗಾರರ ಬಿಕ್ಕಲಂ/ದಸ್ತಾವೇಜು ಬರಹಗಾರರ ಸಹಿ ಕಡ್ಡಾಯಗೊಳಿಸಬೇಕು.

ಉಪನೋಂದಣಿ ಕಚೇರಿಗಳಲ್ಲಿ ಅನಧಿಕೃತ ವ್ಯಕ್ತಿಗಳು ಬರುವುದನ್ನು ತಡೆಗಟ್ಟಬೇಕು. ಎಲ್ಲ ಅಧಿಕೃತ ಪತ್ರ ಬರಹಗಾರರಿಗೆ ನೋಂದಣಿ ಇಲಾಖೆಯಿಂದ ಗುರುತಿನ ಚೀಟಿ ನೀಡಬೇಕು. ಬೇರೆ ಬೇರೆ ರಾಜ್ಯಗಳಲ್ಲಿ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಲಾಗಿದೆ. ಅದರಂತೆ ನಮ್ಮ ರಾಜ್ಯದ ಪತ್ರ ಬರಹಗಾರರಿಗೆ ಪ್ರತ್ಯೇಕ ಲಾಗಿನ್ ನೀಡಬೇಕು.

ರಾಜ್ಯ ಸರ್ಕಾರ ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು 5 ದಿನದಿಂದ ಮಿನಿ ವಿಧಾನಸೌಧ ಎದುರು ಧರಣಿ ನಡೆಸಿದ್ದೇವೆ. ಆದರೆ, ಸರ್ಕಾರಕ್ಕೆ ಸ್ಪಂದಿಸದ ಕಾರಣ ಧರಣಿಯನ್ನು ಬೆಳಗಾವಿ ಸುವರ್ಣಸೌಧ ಎದುರು ಧರಣಿ ಆರಂಭಿಸಲು ಮುಂದಾಗಿದ್ದು, ಡಿ. 16ರಿಂದ ಮಾಡಲಿದ್ದೇವೆ ಎಂದು ತಿಳಿಸಿದರು. ಸ್ಥಳಕ್ಕೆ ಬಂದ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಅವರಿಗೆ ಮನವಿ ಸಲ್ಲಿಸಿದರು.

ಸಂದ ಪ್ರಮುಖರಾದ ರಮೇಶ ಕುಲಕಣಿರ್, ಗೋಪಾಲಕೃಷ್ಣ, ಶ್ರೀನಿವಾಸ ಖಂಡೆ, ವಿನಾಯಕ, ಗದಿಗೆಪ್ಪ ಕಮ್ಮಾರ, ಕೋಟ್ರೇಶ ಮೂಲಿಮನಿ, ಮೋಹನ ಮಾನೆ, ವಾದಿರಾಜ ಉಡಪಿ, ಶ್ರೀರಾಮಚಂದ್ರ ಮುದ್ರಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net