

ರಾಣೆಬೆನ್ನೂರ: ಕಾರಿನ ಸಾಲ ಕಂತು ತುಂಬದ ಕಾರಣ ಆರ್ಬಿಐ ನಿಯಮಗಳನ್ನು ಗಾಳಿಗೆ ತೂರಿ ಕಾರು ಸೀಜ್ ಮಾಡಿ ಬೇರೆಯವರಿಗೆ ಮಾರಾಟ ಮಾಡಿದ್ದು ಕೂಡಲೇ ಖಾಸಗಿ ಫೈನಾನ್ಸ್ ನವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ದಲಿತಪರ, ಕನ್ನಡಪರ ಸಂಟನೆಗಳ ವತಿಯಿಂದ ನಗರದ ಫೈನಾನ್ಸ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ನೇತೃತ್ವ ವಹಿಸಿದ್ದ ಕೆ.ಆರ್. ಉಮೇಶ ಮಾತನಾಡಿ, ನಗರದ ಸಚೀನ ನೀರಲಗಿ ಎಂಬುವರು ಖಾಸಗಿ ಫೈನಾನ್ಸ್ ನಲ್ಲಿ ಸಾಲ ಪಡೆದು ಕಾರು ತೆಗೆದುಕೊಂಡಿದ್ದ. ಇಷ್ಟು ದಿನಗಳ ಕಾಲ ಸಾಲದ ಕಂತು ಸರಿಯಾಗಿ ತುಂಬುತ್ತ ಬಂದಿದ್ದಾನೆ. ಆದರೆ, ಬಾಡಿಗೆ ಸರಿಯಾಗಿ ದೊರೆಯದ ಕಾರಣ ಎರಡು ತಿಂಗಳು ಕಂತು ತುಂಬಿರಲಿಲ್ಲ.
ಹೀಗಾಗಿ ಖಾಸಗಿ ಫೈನಾನ್ಸ್ ನವರು ಕಾರನ್ನು ಚಿತ್ರದುರ್ಗದಲ್ಲಿ ಸೀಜ್ ಮಾಡಿಕೊಂಡು ಬಂದಿದ್ದಾರೆ. ಆರ್ಬಿಐ ನಿಯಮಾವಳಿ ಪ್ರಕಾರ ಕಾರನ್ನು ಮಾಲೀಕರಿಗೆ ನೋಟಿಸ್ ಜಾರಿ ಹಾಗೂ 45 ದಿನದ ಬಳಿಕ ಬೇರೆಯವರಿಗೆ ಮಾರಾಟ ಮಾಡಬೇಕು. ಖಾಸಗಿ ೈನಾನ್ಸ್ನವರು ಎಲ್ಲ ನಿಯಮ ಗಾಳಿಗೆ ತೂರಿ ನಮಗೆ ಮಾಹಿತಿ ಇಲ್ಲದೆ ಕಾರು ಮಾರಾಟ ಮಾಡಿದ್ದಾರೆ. ನಾವೀಗ ಕಂತು ತುಂಬಲು ಸಿದ್ಧರಿದ್ದೇವೆ. ಆದರೆ ಫೈನಾನ್ಸ್ ನವರು ಕಾರು ಕೊಡಲು ಸಿದ್ಧವಾಗಿಲ್ಲ. ನಮಗೆ ಕಾರು ಕೊಡಬೇಕು. ಅಲ್ಲಿಯವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ ಎಂದು ಪಟ್ಟುಹಿಡಿದು, ಧರಣಿ ಮುಂದುವರಿಸಿದ್ದಾರೆ.
ಕಾರಿನ ಮಾಲೀಕ ಸಚೀನ ನೀರಲಗಿ, ಪ್ರಮುಖರಾದ ರೇಣುಕಾ ಲಮಾಣಿ, ಸುಧಾ ಪಾಟೀಲ, ಪ್ರವಿಣ ಅಸುಂಡಿ, ಹನುಮಂತ ದುಗ್ಗತ್ತಿ, ಪದ್ಮಾ ತುಮ್ಮಿನಕಟ್ಟಿ, ಕುಮಾರ ಕೂಸಗೂರ, ಮಾಲತೇಶ ಕುಸಗೂರ, ಮಾಲತೇಶ ಹೊಳೆಆನ್ವೇರಿ, ಹರೀಶ ಮಾಸೂರ ಮತ್ತಿತರರು ಇದ್ದರು.