ಶಿಗ್ಗಾಂವಿ ತಾಲೂಕಿನ ಗಂಗ್ಯಾನೂರ ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಶವದ ಜತೆ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪರಸುರಾಮ ಸೊನ್ನದ, ಪಿಎಸ್‌ಐ ವೈ.ಕೆ.ಹಿರಗಣ್ಣನವರ, ಗಣೇಶ ಸವಣೂರ ಇದ್ದರು. ಪೋಟೊ: 25-ಬಿಎನ್‌ಕೆ-1ಎ. ಮೃತ ಶೇಕಪ್ಪ ಇಂಗಳಗಿ ಶವ.
ಅಂತ್ಯ ಸಂಸ್ಕಾರಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಶವದ ಜತೆಗೆ ಬಂದು ಶಿಗ್ಗಾಂವಿ ತಹಸೀಲ್ದಾರ್ ಕಚೇರಿಗೆ ಗಂಗ್ಯಾನೂರ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ಜರುಗಿತು.
ಶಿಗ್ಗಾಂವಿ ತಾಲೂಕಿನ ಗಂಗ್ಯಾನೂರ ಗ್ರಾಮದ ನಿವಾಸಿ ಶೇಕಪ್ಪ ಮಲ್ಲಪ್ಪ ಇಂಗಳಗಿ(62) ಅನಾರೋಗ್ಯದಿಂದ ನಿಧನರಾಗಿದ್ದರು. ಮೃತರ ಶವ ಸಂಸ್ಕಾರಕ್ಕೆ ಕುಟುಂಬಸ್ಥರ ಸ್ವಂತ ಜಾಗ ಇಲ್ಲ. ಕಂದಾಯ ಇಲಾಖೆಯ ಜಾಗವನ್ನು ಗ್ರಾಮದ ಪ್ರಭಾವಿ ಅತಿಕ್ರಮಣ ಮಾಡಿಕೊಂಡು ಅಡಿಕೆ ಬೆಳೆ ಮಾಡಿದ್ದಾನೆ. ಅವರು ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಹೀಗಾಗಿ ಗ್ರಾಮದಲ್ಲಿ ಯಾರಾದರೂ ನಿಧನರಾದರೇ ಶವ ಸಂಸ್ಕಾರ ಮಾಡಲು ಜಾಗ ಇಲ್ಲದಂತಾಗಿದೆ. ಉಳ್ಳವರು ತಮ್ಮ ಜಮೀನುಗಳಲ್ಲಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಉಳಿದವರು ಎಲ್ಲಿ ಶವ ಸಂಸ್ಕಾರ ಮಾಡಬೇಕು?. ನಮಗೆ ಅತಿಕ್ರಮಣ ಮಾಡಿರುವ ಜಾಗ ತೆರವು ಮಾಡಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ಮಾಡಿ ಕೊಡಿ, ಇಲ್ಲದಿದ್ದಲ್ಲಿ ತಹಸೀಲ್ದಾರ್ ಕಚೇರಿ ಮುಂದೆ ಅಂತ್ಯ ಸಂಸ್ಕಾರ ಮಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ಮತ್ತು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಗಣೇಶ ಸವಣೂರ, ಪಿಎಸ್‌ಐ ವೈ.ಕೆ. ಹಿರಗಣ್ಣನವರ ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಕಂದಾಯ ಇಲಾಖೆಯ ಜಾಗ ಅತಿಕ್ರಮಣ ಮಾಡಿರುವ ಕುರಿತು ವ್ಯಾಜ್ಯ ನ್ಯಾಯಾಲಯದಲ್ಲಿದ್ದು, ಸೋಮವಾರ ಪ್ರಕರಣದ ವಿಚಾರಣೆಗೆ ಬರಲಿದೆ. ವಿಚಾರಣೆಯ ನಂತರ ಅತಿಕ್ರಮಣ ಜಾಗ ತೆರವುಗೊಳಿಸಿ ಗ್ರಾಮಕ್ಕೆ ಸ್ಮಶಾನ ಜಾಗ ನೀಡುವ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಗ್ರಾಮಸ್ಥರು, ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಕ್ಕೆ ತೆರಳಿ ಅತಿಕ್ರಮಣವಾಗಿದ್ದ ಜಾಗದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಿದರು.
ಶಿಗ್ಗಾಂವಿ ತಾಲೂಕಿನ ಗಂಗ್ಯಾನೂರ ಗ್ರಾಮದಲ್ಲಿ ಸುಮಾರು 2 ಎಕರೆ ಸರ್ಕಾರಿ ಜಾಗವನ್ನು ಗ್ರಾಮದ ಸ್ಮಶಾನ ಭೂಮಿಗಾಗಿ ಮೀಸಲಿಡಲಾಗಿತ್ತು. ಆದರೆ, ಈ ಜಮೀನನ್ನು ಅದೇ ಗ್ರಾಮದ ಹನುಮಂತಪ್ಪ ಬಂಕಾಪೂರ ಮತ್ತು ಮಲ್ಲೇಶಪ್ಪ ಬಂಕಾಪೂರ ಎನ್ನುವವರು ಸುಮಾರು ನಾಲ್ಕೈದು ವರ್ಷಗಳ ಹಿಂದೆ ಅತಿಕ್ರಮಣ ಮಾಡಿ ಸಾಗುವಳಿ ಮಾಡುತ್ತ್ತ ಬೇಲಿ ಹಾಕಿಕೊಂಡಿದ್ದಾರೆ. ಹೀಗಾಗಿ ನಮಗೆ ಸ್ಮಶಾನ ಜಾಗ ತೆರವು ಮಾಡಿಕೊಡಿ ಎಂದು ಹಲವು ಬಾರಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.