

ಸವಣೂರ: ಹಣ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಗಭಿರ್ಣಿಯ ಹೊಟ್ಟೆಗೆ ಒದ್ದ ಪರಿಣಾಮ ಆಕೆಗೆ ಹೆರಿಗೆಯಾಗಿ ಎರಡು ಹಸುಗೂಸು ಮೃತಪಟ್ಟ ಘಟನೆ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ.
ಪವಿತ್ರಾ ಮುತ್ತಣ್ಣ ಲಮಾಣಿ ಎಂಬುವರ ಹಸುಗೂಸು ಮೃತಪಟ್ಟಿರುವುದು.
ಪ್ರಕರಣಕ್ಕೆ ಸಂಬಂಧಿಸಿ ಹಲ್ಲೆ ಮಾಡಿದ ಆರೋಪಿಗಳಾದ ಸುರೇಶ ಹಾಲಪ್ಪ ಲಮಾಣಿ, ಪರಶುರಾಮ ಹಾಲಪ್ಪ ಲಮಾಣಿ, ಮಹೇಶ ಸೋಮಲೆಪ್ಪ ಲಮಾಣಿ, ಸಕ್ಕುಬಾಯಿ ಸುರೇಶ ಲಮಾಣಿ ಎಂಬುವರ ವಿರುದ್ಧ ಸವಣೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪವಿತ್ರಾ ಅವಳ ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ ಸಮಯದಲ್ಲಿ ಆರೋಪಿತರು ಪವಿತ್ರಾಳ ತಾಯಿಯೊಂದಿಗೆ ಮನೆ ಅಡಚಣೆ ಸಲುವಾಗಿ ತೆಗೆದುಕೊಂಡು ಹಣ ವಾಪಸ್ ಕೊಡು ಎಂದು ಜಗಳ ತೆಗೆದಿದ್ದಾರೆ. ಆಗ ಪವಿತ್ರಾಳ ತಾಯಿ ಸದ್ಯ ನಮ್ಮ ಬಳಿ ಹಣವಿಲ್ಲ. ಮುಂದೆ ಕೊಡುತ್ತೇನೆ ಎಂದು ಹೇಳಿದಾಗ, ಜಗಳ ತೆಗೆದ ಆರೋಪಿಗಳು ಪವಿತ್ರಾ ಹಾಗೂ ಆಕೆಯ ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ಸಮಯದಲ್ಲಿ ಪವಿತ್ರಾಳ ಹೊಟ್ಟೆಗೆ ಒದ್ದಿದ್ದರಿಂದ ಕೂಡಲೇ ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಹೆರಿಗೆ ಆಗಿದ್ದು ಎರಡು ಹಸುಗೂಸು ಮೃತಪಟ್ಟಿವೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.