ಶಾಸಕ ಪ್ರಕಾಶ ಕೋಳಿವಾಡ ವಿರುದ್ಧ ಮಾಜಿ ಶಾಸಕ ಅರುಣಕುಮಾರ ಹೇಳಿದ್ದೇನು...

Arunkumar
Arunkumar
Published on

ರಾಣೆಬೆನ್ನೂರ: ಅಹಿಂದ ಮತಗಳನ್ನು ಪಡೆದು ಹಾಗೂ ನಾನು ಸದಾ ಅಹಿಂದ ಪರವೆಂದು ಎದೆ ಮುಟ್ಟಿಕೊಳ್ಳುವ ಶಾಸಕ ಪ್ರಕಾಶ ಕೋಳಿವಾಡ ಅಹಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆಳಕ್ಕೆ ಇಳಿಸಲು ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಗಂಭೀರ ಆರೋಪ ಮಾಡಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಸಭೆಯ ಸದಸ್ಯರ ಅಧಿಕಾರ ಮುಗಿದ ನಂತರ ವಾಣಿಜ್ಯ ಮಳಿಗೆಗಳ ತೆರವಿಗೆ ನೋಟಿಸ್ ನೀಡಲಾಗಿದೆ. ವರ್ತಕರು ಸರ್ಕಾರಕ್ಕೆ ಹಣವನ್ನು ತುಂಬಬೇಕು. ಯಾವುದೇ ಕಾರಣಕ್ಕೂ ಹೆಚ್ಚಿನ ಹಣ ಇತರರಿಗೆ ನೀಡಬಾರದು ಎಂದರು.

ರಾಜ್ಯ ಸರ್ಕಾರ ಖುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿದ್ದು ಜನರ ಸಮಸ್ಯೆಗಳನ್ನು ಕೇಳುವರು ಯಾರು ಇಲ್ಲವಾಗಿದೆ.

ತಾಲೂಕು ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಬೆಂಗಳೂರಿನಲ್ಲಿ ಕೋಟ್ಯಾಂತರ ಹಣ ದರೋಡೆಯಾಗಿದ್ದು, ರಾಣೆಬೆನ್ನೂರ ನಗರದಲ್ಲಿ ಹಾಡುಹಗಲೇ ಕಳ್ಳತನವಾಗುತ್ತಿವೆ ಎಂದರು.

ಮೆಕ್ಕೆಜೋಳಕ್ಕೆ ಬೆಂಬಲ ಘೋಷಣೆ ಹಾಗೂ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ನಗರದಲ್ಲಿ ನಮ್ಮ ಪಕ್ಷದ ವತಿಯಿಂದ ನ. 17ರಂದು ನಡೆಸಿದ ಹೋರಾಟ ಯಶಸ್ವಿಯಾಗಿದೆ. ಇದರಿಂದ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಖರೀದಿ ಕೇಂದ್ರ ತೆರೆಯುವ ಭರವಸೆ ನೀಡಿದ್ದಾರೆ. ನಿರುದ್ಯೋಗ ಮುಕ್ತ ರಾಣೆಬೆನ್ನೂರ ಮಾಡಲು ಕೈಗಾರಿಕೆ ಸ್ಥಾಪಿಸಲು ಶಾಸಕರು ಮುಂದಾಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಶಹರ ಘಟಕದ ಅಧ್ಯಕ್ಷ ಮಂಜುನಾಥ ಕಾಟಿ, ನಿಂಗರಾಜ ಕೋಡಿಹಳ್ಳಿ, ಎ.ಬಿ. ಪಾಟೀಲ, ಚೋಳಪ್ಪ ಕಸವಾಳ, ಸಿದ್ದು ಚಿಕ್ಕಬಿದರಿ, ಬಸಣ್ಣ ಹುಲ್ಲತ್ತಿ, ಪವನಕುಮಾರ ಮಲ್ಲಾಡದ, ಪ್ರಕಾಶ ಪೂಜಾರ, ಮಲ್ಲಿಕಾರ್ಜುನ ಅಂಗಡಿ, ಶ್ರೀನಿವಾಸ ಜಾಡಮಲಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net