ಸವಣೂರು: ಪೊಲೀಸ್ ಅಧಿಕಾರಿಗಳ ಹಠಮಾರಿತನದಿಂದಾಗಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಅರ್ಧಕ್ಕೆ ಮೊಟಕುಗೊಳಿಸಿ, ಮೂರ್ತಿಯನ್ನು ಮರಳಿ ದೇವಸ್ಥಾನದಲ್ಲೇ ಮರುಪ್ರತಿಷ್ಠಾಪಿಸಿದ ಘಟನೆ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಪಟ್ಟಣದ ಸಿಂಪಿಗಲ್ಲಿಯ ಗಣೇಶ ದೇವಸ್ಥಾನದಲ್ಲಿ 39ನೇ ವರ್ಷದ ಗಣೇಶೋತ್ಸವ ನೆರವೇರಿಸಿದ ಭಕ್ತರು, ಮೂರ್ತಿ ವಿಸರ್ಜನಾ ಮೆರವಣಿಗೆಗೆ ಡಿಜೆ ಬಳಸಲು ಇಚ್ಛಿಸಿದ್ದರು. ಆದರೆ, ಪೊಲೀಸ್ ಇಲಾಖೆ ಪರವಾನಗಿ ನೀಡಲಿಲ್ಲ. ಪರವಾನಗಿಗಾಗಿ ವರಾತ ಮಾಡದ ಭಕ್ತರು ಸಾಂಪ್ರದಾಯಿಕ ಕಲಾತಂಡಗಳೊಂದಿಗೆ ಸರಳ ಹಾಗೂ ಭಕ್ತಿಭಾವದ ಮೆರವಣಿಗೆಯೊಂದಿಗೆ ರಾಜಬೀದಿಯಲ್ಲಿ ಹೊರಟಿದ್ದರು.
ಮೆರವಣಿಗೆ ಸಾಗುವ ಮಾರ್ಗದಲ್ಲಿ ಲಾಲಶಾಕಟ್ಟೆ ಮಸೀದಿ ಇರುವ ಕಾರಣಕ್ಕೆ ಆ ಮಾರ್ಗವಾಗಿ ತೆರಳಲು ಪೊಲೀಸರು ಅಡ್ಡಿಪಡಿಸಿದರು. ಇದರಿಂದ ಆಕ್ರೋಶಗೊಂಡ ಭಕ್ತರು, ಸ್ಥಳದಲ್ಲೇ ಗಣೇಶ ಮೂರ್ತಿಯಿಟ್ಟು ಭಜನೆ ಮಾಡುತ್ತ ಪ್ರತಿಭಟನೆ ಆರಂಭಿಸಿದರು.
ಎಸ್ಪಿ ಸಂಧಾನ ವಿಫಲ: ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಎಸ್ಪಿ ಯಶೋಧಾ ವಂಟಗೋಡಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಸಮಿತಿ ಸದಸ್ಯರೊಂದಿಗೆ ಮಾತುಕತೆ ನಡೆಸಿ, ಮನವೊಲಿಸಲು ಯತ್ನಿಸಿದರೂ ಯಾವುದೇ ಫಲ ಸಿಗಲಿಲ್ಲ. ಪೂರ್ವ ನಿಗದಿತ ರಾಜಬೀದಿಯಲ್ಲೇ ಮೆರವಣಿಗೆಗೆ ಅವಕಾಶ ನೀಡಬೇಕು ಎಂದು ಸಮಿತಿ ಸದಸ್ಯರು ಪಟ್ಟು ಹಿಡಿದರು.
ಪೊಲೀಸ್ ಅಧಿಕಾರಿಗಳ ಕಠಿಣ ಧೋರಣೆಯಿಂದ ಬೇಸತ್ತ ಭಕ್ತರು ಹಾಗೂ ಸಮಿತಿ ಪದಾಧಿಕಾರಿಗಳು, ವಾಗ್ವಾದ ನಡೆಸುವ ಬದಲು ಮೆರವಣಿಗೆ ರದ್ದುಗೊಳಿಸಿದರು. ಅಲ್ಲದೆ, ಗಣೇಶ ಮೂರ್ತಿಯನ್ನು ದೇವಸ್ಥಾನದಲ್ಲಿ ಮರು ಪ್ರತಿಷ್ಠಾಪಿಸುವುದಾಗಿ ಘೋಷಿಸಿದರು. ಇಷ್ಟಾದರೂ, ಧೋರಣೆ ಬದಲಿಸಿದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 500 ಮೀಟರ್ವರೆಗೆ ಸಾಗಿದ್ದ ಮೂರ್ತಿಯನ್ನು ವಾಪಸ್ ತಂದು ದೇವಸ್ಥಾನದಲ್ಲೇ ಪುನಃ ಪ್ರತಿಷ್ಠಾಪಿಸಿದರು.
ಅರುಣ ಬಗರೆ, ಮಹೇಶ ಸಾಲಿಮಠ, ಗಂಗಾಧರ ಬಾಣದ, ಪಾಂಡುರಂಗ ಮಹೇಂದ್ರಕರ, ಜಯತೀರ್ಥ ದೇಶಪಾಂಡೆ, ಮಹೇಶ ಮುದಗಲ್, ಶ್ರೀನಿವಾಸ ಗಿತ್ತೆ, ಗಜಾನನ ರಾಶಿನಕರ, ಪ್ರವೀಣ ಬಾಲೇಹೊಸೂರ, ವಿನಾಯಕ ಕುಲಕರ್ಣಿ, ಸಮೀತ ಕೆಮ್ಮಣಕೇರಿ, ಮಹೇಶ ಜಡಿ, ಶಂಕರ ಪಾಟೀಲ, ಗೀರೀಶ ಬಗರೆ ಹಾಗೂ ಮುಖಂಡರು ಉಪಸ್ಥಿತರಿದ್ದರು
ಪ್ರತಿಕ್ರಿಯಿಸಲು ನಿರಾಕರಿಸಿದ ಪೊಲೀಸರು: ಘಟನೆ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಕೇಳಲು ಮುಂದಾದಾಗ ಎಸ್ಪಿ ಯಶೋಧಾ ವಂಟಗೋಡಿ ಸೇರಿದಂತೆ ಯಾವೊಬ್ಬ ಪೊಲೀಸ್ ಅಧಿಕಾರಿಯೂ ಸ್ಪಂದಿಸಲಿಲ್ಲ.
ಹಲವು ದಶಕಗಳಿಂದ ಸವಣೂರಿನಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಮುಸ್ಲಿಂ ಸಮುದಾಯದವರೂ ಈ ಮೆರವಣಿಗೆಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ತಮ್ಮ ವಿರೋಧವಿಲ್ಲ ಎಂದು ಸ್ವತಃ ಮುಸ್ಲಿಮರಿಂದಲೇ ಪೊಲೀಸರೆದುರು ಸ್ಪಷ್ಟನೆ ಕೊಡಿಸಲಾಗಿತ್ತು. ಆದರೂ, ಪೊಲೀಸ್ ಅಧಿಕಾರಿಗಳು ಏಕಪಕ್ಷೀಯವಾಗಿ ಹಠಮಾರಿತನ ಪ್ರದರ್ಶಿಸಿ ಮೆರವಣಿಗೆ, ಹಬ್ಬ ಹಾಗೂ ಸಾಮಾಜಿಕ ಭಾವೈಕ್ಯ ಹಾಳು ಮಾಡಿದ್ದಾರೆ.
| ಮಹೇಶ ಸಾಲಿಮಠ, ಅಧ್ಯಕ್ಷರು, ಗಣೇಶೋತ್ಸವ ಸಮಿತಿ
ಸವಣೂರಿನಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯ. ಗಣೇಶ ವಿಸರ್ಜನಾ ಮೆರವಣಿಗೆ ಮೊಟಕುಗೊಳಿಸಿ ಮೂರ್ತಿ ಮರುಸ್ಥಾಪನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳಿಗೆ ವಿಘ್ನನಿವಾರಕನೇ ತಕ್ಕ ಶಿಕ್ಷೆ ನೀಡುತ್ತಾನೆ. ಇಲ್ಲದ ಕಾನೂನುಗಳನ್ನು ಹಿಂದೂಗಳ ಮೇಲೆ ಹೇರಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎದುರಾಗುವ ಪರಿಸ್ಥಿತಿಗೆ ಪೊಲೀಸ್ ಇಲಾಖೆಯೇ ಹೊಣೆ.
| ಗಂಗಾಧರ ಬಾಣದ, ಜಿಲ್ಲಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ