ಹೆಲ್ಮೆಟ್, ಇನ್ಸೂರೆನ್ಸ್ ಇಲ್ಲದ 100ಕ್ಕೂ ಹೆಚ್ಚು ಬೈಕ್‌ಗಳ ವಶ

ಬೈಕ್ ಗಳ‌
ಬೈಕ್ ಗಳ‌
Published on

ರಾಣೆಬೆನ್ನೂರು: ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸುವ ದ್ವಿಚಕ್ರ ವಾಹನ ಸವಾರರ ವಿರುದ್ಧ ಸಂಚಾರ ಠಾಣೆ ಪೊಲೀಸರು ಬುಧವಾರ ವಿಶೇಷ ಕಾರ್ಯಾಚರಣೆ ನಡೆಸಿ, ಹೆಲ್ಮೆಟ್ ಧರಿಸದ, ವಾಹನದ ಇನ್ಸೂರೆನ್ಸ್ ಹಾಗೂ ಚಾಲನಾ ಪರವಾನಗಿ ಇಲ್ಲದ 100ಕ್ಕೂ ಅಧಿಕ ಬೈಕ್‌ಗಳನ್ನು ವಶಕ್ಕೆ ಪಡೆದರು.

ಇಲ್ಲಿಯ ಸಿದ್ದೇಶ್ವರ ನಗರ, ಬಸ್ ನಿಲ್ದಾಣದ ವೃತ್ತ ಸೇರಿ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದರು. ಈ ವೇಳೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುತ್ತಿದ್ದವರು, ಇನ್ಸೂರೆನ್ಸ್ ಮಾಡಿಸದವರು ಹಾಗೂ ಚಾಲನಾ ಪರವಾನಗಿ ಹೊಂದಿರದ ಸವಾರರು ಸಿಕ್ಕಿಬಿದ್ದರು. ನಿಯಮ ಉಲ್ಲಂಘಿಸಿದ ಬೈಕ್‌ಗಳನ್ನು ಪೊಲೀಸ್ ಠಾಣೆಗೆ ಕೊಂಡೊಯ್ಯಲಾಯಿತು.

ನಂತರ ಕೆಲ ಸವಾರರು ಸ್ಥಳದಲ್ಲಿಯೇ ಹೆಲ್ಮೆಟ್ ತರಿಸಿಕೊಂಡು ಧರಿಸಿದ್ದು, ಇನ್ಸೂರೆನ್ಸ್ ಇಲ್ಲದವರು ಸ್ಥಳದಲ್ಲಿಯೆ ಇನ್ಸೂರೆನ್ಸ್ ಮಾಡಿಸಿಕೊಂಡರು. ದಾಖಲೆಗಳನ್ನು ಹಾಜರುಪಡಿಸಿದ ಬಳಿಕ ಅಂತಹ ವಾಹನಗಳನ್ನು ಪೊಲೀಸರು ಬಿಡುಗಡೆ ಮಾಡಿದರು.

ನಿಯಮ ಉಲ್ಲಂಘಿಸಿದ 60ಕ್ಕೂ ಅಧಿಕ ಬೈಕ್ ಸವಾರರಿಗೆ ತಲಾ ಒಂದಕ್ಕೆ 500 ರೂ.ನಂತೆ ದಂಡ ವಿಧಿಸಲಾಯಿತು. ಸಂಚಾರ ನಿಯಮಗಳನ್ನು ಪಾಲಿಸುವಂತೆ ಪೊಲೀಸರು ಸವಾರರಿಗೆ ಸೂಚನೆ ನೀಡಿದರು. ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ವಾಹನದ ಇನ್ಸೂರೆನ್ಸ್ ಹಾಗೂ ಅಗತ್ಯ ದಾಖಲೆಗಳನ್ನು ಹೊಂದಿರಬೇಕು ಎಂದು ಎಚ್ಚರಿಸಿದರು.

ನಗರದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಹಾಗೂ ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net