ಕೇಂದ್ರದ ಒಕ್ಕೂಟ ವಿರೋಧಿ ನೀತಿಗೆ ಆಕ್ರೋಶ

ನಿಡಸಂಗಿ ಬಸಾಪುರ ಗ್ರಾಮದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿದರು.    ಲಕ್ಷ್ಮಣ ವರ್ದಿ,  ರಾಮೂ ಬೈಲಸೀಮೆ,  ಲಕ್ಷ್ಮವ್ವ ರಾಯಪ್ಪನವರನ ಇತರರಿದ್ದರು.
ನಿಡಸಂಗಿ ಬಸಾಪುರ ಗ್ರಾಮದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರದ ಕಟ್ಟಡವನ್ನು ಶಾಸಕ ಶ್ರೀನಿವಾಸ ಮಾನೆ ಉದ್ಘಾಟಿಸಿದರು. ಲಕ್ಷ್ಮಣ ವರ್ದಿ, ರಾಮೂ ಬೈಲಸೀಮೆ, ಲಕ್ಷ್ಮವ್ವ ರಾಯಪ್ಪನವರನ ಇತರರಿದ್ದರು.
Published on
ಹಾನಗಲ್: ಕೇಂದ್ರ ಸರ್ಕಾರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಹೆಸರು, ಸ್ವರೂಪ ಬದಲಿಸಿ ಶೇ. 40 ರಷ್ಟು ಯೋಜನಾ ವೆಚ್ಚವನ್ನು ರಾಜ್ಯ ಸರ್ಕಾರಗಳ ತಲೆಗೆ ಕಟ್ಟುವ ಮೂಲಕ ಒಕ್ಕೂಟ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ನಿಡಸಂಗಿ ಬಸಾಪುರ ಗ್ರಾಮದಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, 20 ವರ್ಷಗಳ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಖಾತ್ರಿ ಯೋಜನೆ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಮತ್ತು ಬಡತನದ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗದ ಹಕ್ಕು ಖಾತರಿಗೊಳಿಸಿದ ಈ ಯೋಜನೆ ಆರ್ಥಿಕ ತಜ್ಞರ ಮೆಚ್ಚುಗೆ ಗಳಿಸಿದೆ. ಗ್ರಾಮೀಣ ಪ್ರದೇಶದ ಚಿತ್ರಣ ಬದಲಿಸುವ ಈ ಯೋಜನೆಯ ಅಸ್ತಿತ್ವಕ್ಕೆ ಇದೀಗ ಕೇಂದ್ರ ಸರ್ಕಾರ ಧಕ್ಕೆ ತರಲು ಹೊರಟಿದೆ. ಗ್ರಾಮಭಾರತದ ಜೀವನಾಡಿಯಂತಿದ್ದ ಪ್ರಮುಖ ಯೋಜನೆಯೊಂದರ ಹೆಸರು, ಸ್ವರೂಪ ಬದಲಾಗಿ ಮೌಲ್ಯಗಳ ಪಲ್ಲಟವಾಗಿದೆ ಎಂದು ಹರಿಹಾಯ್ದ ಶಾಸಕ ಮಾನೆ, ಮಹತ್ವಾಕಾಂಕ್ಷೆಯ ಯೋಜನೆಯನ್ನು ಮೊದಲಿನ ರೀತಿಯಲ್ಲಿಯೇ ಮುಂದುವರೆಸಬೇಕು. ಗ್ರಾಮೀಣ ಪ್ರದೇಶದ ಜನತೆಯ ಹಿತಾಸಕ್ತಿ ಕಾಯಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಗ್ರಾಪಂ ಸದಸ್ಯ ಲಕ್ಷ್ಮಣ ವರ್ದಿ ಮಾತನಾಡಿದರು. ಸಿಡಿಪಿಒ ರಾಮೂ ಬೈಲಸೀಮೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಮುಖಂಡರಾದ ಮುನ್ನಾ ಪಠಾಣ, ಉಮೇಶ ದೊಡ್ಡಮನಿ, ಮಹ್ಮದ್‌ಹನೀಫ್ ಬಂಕಾಪೂರ, ಬಸವಂತಪ್ಪ ಕಮಾಟಿ, ಶೇಖಪ್ಪ ಕಮಾಟಿ, ಮೃತ್ಯುಂಜಯ ದೇಸಾಯಿ, ಲಕ್ಷ್ಮವ್ವ ರಾಯಪ್ಪನವರ, ಲಕ್ಷ್ಮಣ ಗೋಡಿ, ಹನುಮಂತಪ್ಪ ಯಳವಟ್ಟಿ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net