Murder ಪಾನ್‌ಶಾಪ್ ಮಾಲೀಕನ ಕೊಲೆ

ಕೊಲೆ Murder ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರಿಗೆ ಮನವಿ ಸಲ್ಲಿಸಲಾಯಿತು.
ಕೊಲೆ Murder ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರಿಗೆ ಮನವಿ ಸಲ್ಲಿಸಲಾಯಿತು.
Published on
ರಟ್ಟಿಹಳ್ಳಿ: ಪಟ್ಟಣದಲ್ಲಿ ಮೊಟ್ಟೆ ಖರೀದಿಸಿದ ಹಣದ ವಿಚಾರಕ್ಕೆ ಹಲ್ಲೆ ಮಾಡಿ ಅಂಗಡಿಕಾರನ ಕೊಲೆ Murder ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಗುರುವಾರ ಬಂಧಿಸಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಪಟ್ಟಣದ ಮಳಗಿ ರಸ್ತೆಯ ಬಳಿ ಶಿವಾಜಿರಾವ್ ಭೈರೋಜಿ ಅವರು ಅನೇಕ ವರ್ಷಗಳಿಂದ ಪಾನ್‌ಶಾಪ್ ಇಟ್ಟಕೊಂಡಿದ್ದರು. ಬುಧವಾರ ಸಂಜೆ 7.30ರ ಸುಮಾರಿಗೆ ಶಿವಾಜಿರಾವ್ ಅವರ ಮಗ ಭರತ್ ಅಂಗಡಿಯಲ್ಲಿದ್ದರು. ಈ ವೇಳೆ ವಾಸೀಂ ವಜೀರಸಾಬ್ ಮುಲ್ಲಾ ಮತ್ತು ಮೂವರು ಸಹೋದರರು ಆಗಮಿಸಿ, 100 ರೂಪಾಯಿ ಮೊತ್ತದ ಮೊಟ್ಟೆ ಖರೀದಿಸಿದ್ದರು.
ನಂತರ 500 ರೂಪಾಯಿ ನೋಟು ನೀಡಿದ್ದು, ಚಿಲ್ಲರೆ ಕೊಡು ಎಂದು ಭರತ್ ಜತೆಗೆ ಜಗಳ ತೆಗೆದಿದ್ದರು. ಜಗಳ ಬಿಡಿಸಲು ಹೋದ ಶಿವಾಜಿರಾವ್ ಮೇಲೆ ನಾಲ್ವರು ಸಹೋದರರು ಮನಬಂದಂತೆ ಥಳಿಸಿ, ಹಲ್ಲೆ ಮಾಡಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಭರತನಿಗೆ ಗಾಯಗಳಾಗಿವೆ.
ತಂದೆ ಮೇಲೆ ಹಲ್ಲೆ ಮಾಡಿ, ಅವರ ಸಾವಿಗೆ ಕಾರಣರಾದ ಪಟ್ಟಣದ ವಾಸೀಂ ವಜೀರಸಾಬ್ ಮುಲ್ಲಾ, ಸರ್ಪರಾಜ್ ವಜೀರಸಾಬ್ ಮುಲ್ಲಾ, ಸಾಧಿಕ ವಜೀರಸಾಬ್ ಮುಲ್ಲಾ ಮತ್ತು ಸಿರಾಜ್ ವಜೀರಸಾಬ್ ಮುಲ್ಲಾ ವಿರುದ್ಧ ಪಟ್ಟಣದ ಠಾಣೆಯಲ್ಲಿ ಬುಧವಾರ ರಾತ್ರಿ ಪುತ್ರ ಭರತ್ ದೂರು ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಾಸೀಂ, ಸರ್ರಾಜ್ ಮತ್ತು ಸಾದಿಕ್ ಮುಲ್ಲಾನನ್ನು ಪೊಲೀಸರು ಬಂಧಿಸಿದ್ದು, ಸಿರಾಜ್ ಮುಲ್ಲಾ ತಲೆಮರೆಸಿಕೊಂಡಿದ್ದಾನೆ.
ಮರ್ಮಾಂಗಕ್ಕೆ ಹೊಡೆದು ಕೊಲೆ: ಮೊಟ್ಟೆ ಖರೀದಿಸಿ ಹಣ ವಿಚಾರಕ್ಕೆ ನಾಲ್ವರು ಆರೋಪಿಗಳು ನನ್ನ ಜತೆಗೆ ಜಗಳ ತೆಗೆದಿದ್ದರು. ಆಗ ಸಮೀಪದಲ್ಲೇ ಇದ್ದ ನನ್ನ ತಂದೆ ಶಿವಾಜಿರಾವ್ ಜಗಳ ಬಿಡಿಸಲು ಬಂದರು. ವಜೀರಸಾಬ್ ಮುಲ್ಲಾ ಮತ್ತು ಆತನ ಸಹೋದರರು ನನ್ನ ತಂದೆಯನ್ನು ಮನಸೋ ಇಚ್ಛೆ ಥಳಿಸಿದರು. ಅಲ್ಲದೆ, ಎದೆಗೆ ಕಲ್ಲು ಹಾಕಿ, ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪುತ್ರ ಭರತ ದೂರಿನಲ್ಲಿ ತಿಳಿಸಿದ್ದಾರೆ.

ಕಠಿಣ ಶಿಕ್ಷೆ ವಿಧಿಸಲು ಒತ್ತಾಯ: ಶಿವಾಜಿರಾವ್ ಅವರ ಶವವನ್ನು ಗುರುವಾರ ಮನೆಗೆ ತರಲಾಯಿತು. ಜಿಲ್ಲಾ ಬಿಜೆಪಿ ಘಟಕ, ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ಮರಾಠಾ ಸಮಾಜದ ಪದಾಧಿಕಾರಿಗಳು ಮನೆ ಎದುರು ಜಮಾಯಿಸಿ, ಹಲ್ಲೆಕೋರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣದ ಆರೋಪಿಗಳು ಪಟ್ಟಣದಲ್ಲಿ ಪದೇಪದೆ ಗಲಾಟೆ ಮಾಡುತ್ತಿದ್ದರು. ಅವರಿಗೆ ಕಠಿಣ ಶಿಕ್ಷೆಗೆ ವಿಧಿಸಬೇಕು. ಕೊಲೆಯಾದ ಶಿವಾಜಿರಾವ್ ಕುಟುಂಬಕ್ಕೆ ಸರ್ಕಾರ ಪರಿಹಾರ ವಿತರಣೆ ಮಾಡಬೇಕು. ಅಲ್ಲಿಯವರೆಗೆ ಅಂತಿಮ ಸಂಸ್ಕಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.

ನಂತರ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿ, ಅಂತಿಮ ಸಂಸ್ಕಾರ ನೆರವೇರಿಸುವಂತೆ ಮನವಿ ಮಾಡಿದರು. ಶಿವಾಜಿರಾವ್ ಅವರ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ತಹಸೀಲ್ದಾರ್ ಶ್ವೇತಾ ಅಮರಾವತಿ ಅವರಿಗೆ ತಾಲೂಕು ಮರಾಠಾ ಸಮಾಜದಿಂದ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರಿಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ವತಿಯಿಂದ ಮನವಿ ಸಲ್ಲಿಸಲಾಯಿತು. ಬಳಿಕ ಶಿವಾಜಿರಾವ್ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಪದೇಪದೆ ಗಲಾಟೆ ಮಾಡುತ್ತಿದ್ದರು: ಕೇವಲ 100 ರೂಪಾಯಿ ವಿಚಾರಕ್ಕೆ ಗಲಾಟೆ ತೆಗೆದು ನಮ್ಮ ತಂದೆಯನ್ನು ಕಣ್ಣೆದುರೇ ಹಲ್ಲೆ ಮಾಡಿ ಸಾಯಿಸಿಬಿಟ್ಟರು. ಆರೋಪಿಗಳು ಪದೇಪದೆ ಬಂದು ಗಲಾಟೆ ಮಾಡುತ್ತಿದ್ದರು. ಹತ್ಯೆ ಮಾಡಿದವರಿಗೆ ಶಿಕ್ಷೆ ಕೊಡಬೇಕು. ನಮಗೆ ನ್ಯಾಯ ಬೇಕು ಎಂದು ಶಿವಾಜಿರಾವ್ ಭೈರೋಜಿ ಅವರ ಪುತ್ರ ಭರತ ಕಣ್ಣೀರು ಹಾಕಿದರು.
"

ಈಗಾಗಲೇ ಮೂವರು ಆರೋಪಿಗಳನ್ನು ಬಂಧಿಸಿದ್ದು, ಉಳಿದ ಒಬ್ಬ ಆರೋಪಿಯನ್ನು ಬಂಧಿಸಿ ಸೂಕ್ತ ತನಿಖೆ ಮಾಡಲಾಗುವುದು. ಹಿಂದೂ ಮತ್ತು ಮುಸ್ಲಿಂ ಮುಖಂಡರನ್ನು ಕರೆದು ಪಟ್ಟಣದಲ್ಲಿ ಶಾಂತಿ ಕಾಪಾಡಲು ಸಹಕರಿಸುವಂತೆ ತಿಳಿಸಲಾಗಿದೆ. ಅವರು ಸಹಕಾರ ನೀಡಿದ್ದಾರೆ. ಮುನ್ನೆಚ್ಚರಿಕೆಯಾಗಿ ಪಟ್ಟಣದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಯಶೋಧಾ ವಂಟಗೋಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net