ಸವಣೂರು: ಐತಿಹಾಸಿಕ ಮೋತಿ ತಾಲಾಬ್ಗೆ (dirty lake) ಪಟ್ಟಣದ ಕೊಳಚೆ ನೀರು, ತ್ಯಾಜ್ಯ ಸೇರುತ್ತಿರುವುದರಿಂದ ಸಂಪೂರ್ಣ ಮಲಿನಗೊಂಡಿದೆ.
ಸವಣೂರು ಸಂಸ್ಥಾನದ ನವಾಬರು ನಗರದ ಅಂತರ್ಜಲ ವೃದ್ಧಿ ಹಾಗೂ ಜನರಿಗೆ ಕುಡಿಯುವ ನೀರು ಪೂರೈಕೆಗಾಗಿ ದೂರದೃಷ್ಟಿಯಿಂದ 198 ಎಕರೆ ವಿಸ್ತಾರದ ಭವ್ಯ ಕೆರೆ ನಿಮಿರ್ಸಿದ್ದರು. ಈ ಕೆರೆಯ ನೀರು ಎಷ್ಟು ಸ್ವಚ್ಛವಾಗಿತ್ತೆಂದರೆ, ಸೂರ್ಯನ ಬೆಳಕಿಗೆ ಮುತ್ತಿನಂತೆ ಹೊಳೆಯುತ್ತಿತ್ತು. ಇದನ್ನು ಕಂಡು ಮನಸೋತ ನವಾಬರು ಅದಕ್ಕೆ ಮೋತಿ ತಾಲಾಬ್ (ಮುತ್ತಿನ ಕೆರೆ) ಎಂದು ನಾಮಕರಣ ಮಾಡಿದ್ದರು. ಆದರೆ, ಇಂದಿನ ಪುರಸಭೆ ಆಡಳಿತ ನವಾಬರ ದೂರದೃಷ್ಟಿಗೆ ಎಳ್ಳುನಿರು ಬಿಟ್ಟಿದೆ. ಪರಿಣಾಮ ಮೋತಿ ತಾಲಾಬ್ ಇಂದು ಕೊಚ್ಚೆ ಕೆರೆ ಆಗಿ ಮಾರ್ಪಟ್ಟಿದೆ.
ಪಟ್ಟಣ ಬೆಳೆದಂತೆಲ್ಲ ಕೆರೆಯ ಸುತ್ತಮುತ್ತಲಿನ ಕೃಷಿ ಜಮೀನುಗಳು ಬಡಾವಣೆಗಳಾಗಿ ಮಾರ್ಪಟ್ಟವು. ಇದರಲ್ಲಿ ಹಲವು ಲೇಔಟ್ಗಳು ಭೂ ಪರಿವರ್ತನೆ (ಎನ್ಎ) ಆಗದೆ ಅನ-ಧಿಕೃತವಾಗಿ ತಲೆಎತ್ತಿದವು. ಮಶೂರ್ ನಗರ್, ಬಾಳಕೃಷ್ಣ ನಗರ, ಧರ್ಮರಾಜ ನಗರ, ಖಾದ್ರಿಯಾ ನಗರ, ಬಾಹೋಶ್ ನಗರ ಹೀಗೆ ಬಡಾವಣೆಗಳು ಸೃಷ್ಟಿಯಾದವು.
ಮತಬ್ಯಾಂಕ್ಗಾಗಿ ಜನಪ್ರತಿನಿಧಿಗಳು ಒತ್ತಡ ಹೇರಿ ಇಲ್ಲಿ ರಸ್ತೆ, ಚರಂಡಿ ನಿಮಿರ್ಸಿಕೊಟ್ಟರು.
ಈ ಅನಧಿಕೃತ ಬಡಾವಣೆಗಳ ಯೋಜನೆಯಲ್ಲಿ ಕನಿಷ್ಠ ನಾಗರಿಕ ಸೌಲಭ್ಯವು ಇರಲಿಲ್ಲ. ನೂರಾರು ಮನೆಗಳ ಶೌಚಗೃಹಗಳ ಮಲ&ಮೂತ್ರ ಹಾಗೂ ಕಲುಷಿತ ನೀರನ್ನು ನೇರವಾಗಿ ಚರಂಡಿಗಳಿಗೆ ಬಿಡಲಾಯಿತು. ಈ ಚರಂಡಿ ನೀರು ಗದಗ ರಸ್ತೆಯ ಮುಖ್ಯ ಚರಂಡಿ ಸೇರಿ, ಅಲ್ಲಿಂದ ನೇರವಾಗಿ ಮೋತಿ ತಾಲಾಬ್ ಒಡಲು ಸೇರುತ್ತಿದೆ. ಮುತ್ತಿನಂತಿದ್ದ ನೀರು ಇಂದು ಕಡುಕಪ್ಪು ಬಣ್ಣಕ್ಕೆ ತಿರುಗಿ ನಾರುತ್ತಿದೆ.
ಕೆರೆಗೆ ಬಟ್ಟೆ ತೊಳೆಯಲು ಹೋಗುವ ಮಹಿಳೆಯರ ಕಾಲುಗಳಿಗೆ ತೀವ್ರ ಸ್ವರೂಪದ ಸೋಂಕು ತಗುಲುತ್ತಿದೆ. ಕೆರೆಯಲ್ಲಿ ಈಜುವ ಯುವಕರಿಗೆ ಚರ್ಮರೋಗ ಬಾಧಿಸುತ್ತಿದೆ. ರೈತರು ಜಾನುವಾರುಗಳಿಗೆ ಕೆರೆ ಆಶ್ರಯಿಸಿದ್ದರು. ಆದರೆ, ನೀರು ಕೆಡುತ್ತಿರುವುದರಿಂದ ಜಾನುವಾರುಗಳಿಗೂ ತೊಂದರೆಯಾಗುತ್ತಿದೆ.
ಕೆರೆಯ ನೀರು ಗಬ್ಬೆದ್ದು ನಾರುವುದರಿಂದ ಗಣೇಶ ಚತುಥಿರ್ ಸಂದರ್ಭದಲ್ಲಿ ಮೂತಿರ್ ವಿಸಜಿರ್ಸಲು ಸಾಧ್ಯವಿಲ್ಲ ಎಂದು ಸಾರ್ವಜನಿಕರು ಪಟ್ಟು ಹಿಡಿದಿದ್ದರು. ಆಗ ಪುರಸಭೆ ತಾತ್ಕಾಲಿಕವಾಗಿ ಕೆರೆಯ ಪಕ್ಕದಲ್ಲಿ ಪ್ರತ್ಯೇಕ ಹೊಂಡದ ವ್ಯವಸ್ಥೆ ಮಾಡಿ ಕೈತೊಳೆದುಕೊಂಡಿತೇ ವಿನಃ, ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯುವ ಶಾಶ್ವತ ಯೋಜನೆಗೆ ಮುಂದಾಗಲಿಲ್ಲ.
ಸ್ಥಳಿಯ ಪ್ರಜ್ಞಾವಂತ ನಾಗರಿಕರು ಹಾಗೂ ವಿವಿಧ ಸಂಸ್ಥೆಗಳು ಕೆರೆಯ ಪರಿಸ್ಥಿತಿ ಕುರಿತು ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಪುರಸಭೆಗೆ ಹತ್ತಾರು ಬಾರಿ ಮನವಿ ಸಲ್ಲಿಸಿವೆ. ಆದರೆ, ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂರುವ ಅಧಿಕಾರಿಗಳಿಗೆ ಸಾರ್ವಜನಿಕರ ಅಳಲು ಕೇಳಿಸುತ್ತಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಇತಿಹಾಸ ಪ್ರಸಿದ್ಧ ಕೆರೆಯೊಂದು ಕಣ್ಣೆದುರೇ ಹಾಳಾಗುತ್ತಿದ್ದರೂ ಪುರಸಭೆ ಮೌನ ವಹಿಸಿರುವುದು ಆಘಾತಕಾರಿ. ಕಲುಷಿತ ನೀರು ಕೆರೆಗೆ ಸೇರದಂತೆ ತಡೆಯಲು ತುರ್ತಾಗಿ ಒಳಚರಂಡಿ (ಯುಜಿಡಿ) ವ್ಯವಸ್ಥೆ ಹಾಗೂ ಕೊಳಚೆ ನೀರು ಶುದ್ಧೀಕರಣ ಟಕ (ಎಸ್ಟಿಪಿ) ಸ್ಥಾಪಿಸಬೇಕಿದೆ. ಪಟ್ಟಣದ ಜನರು ಕೆರೆಯ ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತದಿದ್ದರೆ, ಮುಂದಿನ ಪೀಳಿಗೆಗೆ ಕುಡಿಯಲು ಒಂದು ಹನಿ ಶುದ್ಧ ನೀರು ಸಿಗದಂತಾಗಬಹುದು ಎಂದು ಸಾಮಾಜಿಕ ಕಾರ್ಯಕರ್ತರು ನೋವಿನಿಂದ ನುಡಿಯುತ್ತಾರೆ.
"
ಕೆರೆಗೆ ಬರುತ್ತಿರುವ ಕೊಳಚೆ ನೀರು ತಡೆಯಲು ಕ್ರಿಯಾ ಯೋಜನೆ ಮಾಡಲಾಗಿದೆ. ವಿಶೇಷ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಲು ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ. ಕೂಡಲೇ ಕಾಮಗಾರಿ ಆರಂಭಿಸಲಾಗುವುದು.