

ರಾಣೆಬೆನ್ನೂರ: ತಾಯಿ ಮೇಲೆ ಹಲ್ಲೆ ಮಾಡಿದ ಮಗ ಹಾಗೂ ಸೊಸೆಗೆ ಒಂದೂವರೆ ವರ್ಷ ಜೈಲು ಶಿಕ್ಷೆ ಹಾಗೂ ತಲಾ ಒಬ್ಬರಿಗೆ 15 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ ಅಧಿಕ ದಿವಾಣಿ ನ್ಯಾಯಾಲಯದ ಜೆಎಂಎಫ್ ಸಿ ನ್ಯಾಯಾಧೀಶೆ ಮೇಘಶ್ರೀ ತೀರ್ಪು ನೀಡಿ ಆದೇಶಿಸಿದ್ದಾರೆ.
ತಾಲೂಕಿನ ಕುಮಾರಪಟ್ಟಣ ಗ್ರಾಮದ ಅಶೋಕ ಪುಟ್ಟಪ್ಪ ಮಡಿವಾಳರ ಹಾಗೂ ಪುಷ್ಪಾ ಅಶೋಕ ಮಡಿವಾಳರ ಶಿಕ್ಷೆಗೊಳಗಾದ ಆರೋಪಿತರು.
ಇವರು ಮನೆಯಲ್ಲಿದ್ದ ತಾಯಿಯ ಮೇಲೆ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದರು. ಈ ಕುರಿತು ಕುಮಾರಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಾಾಧಾರಗಳ ಸಮೇತ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಶಿಕ್ಷೆ ಪ್ರಕಟಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಕವಿತಾ ಎಸ್.ಜಿ. ವಾದ ಮಂಡಿಸಿದ್ದರು.