ಅಂಗವಿಕಲರ ಮಾಸಾಶನ ನಿಲುಗಡೆ ವಿರೋಧಿಸಿ ಪ್ರತಿಭಟನೆ

ಪ್ರತಿಭಟನೆ
ಪ್ರತಿಭಟನೆ
Published on

ಹಾವೇರಿ: ಅಂಗವಿಕಲರ ಮಾಸಾಶನ ನಿಲುಗಡೆ, ವಾಷಿರ್ಕ 32 ಸಾವಿರ ರೂ. ಆದಾಯ ಮಿತಿಯನ್ನು ರದ್ದುಪಡಿಸುವುದು ಹಾಗೂ ಮಾಸಾಶನ ಹೆಚ್ಚಿಸುವಂತೆ ಒತ್ತಾಯಿಸಿ ರಾಜ್ಯ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟದ ಜಿಲ್ಲಾ ಸಮಿತಿ ವತಿಯಿಂದ ನಗರದ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಯಿತು.

ನೇತೃತ್ವ ವಹಿಸಿದ್ದ ಸಮಿತಿಯ ಅಧ್ಯಕ್ಷ ಬಸವರಾಜ ಪೂಜಾರ ಮಾತನಾಡಿ, ವಾಷಿರ್ಕ 32 ಸಾವಿರ ರೂ.ಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಅಂಗವಿಕಲರ ಮಾಸಾಶನವನ್ನು ಪರಿಶೀಲಿಸುವ ಸರ್ಕಾರದ ಆದೇಶದಿಂದ ರಾಜ್ಯದ ಸಾವಿರಾರು ಅಂಗವಿಕಲರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾಸಾಶನ ಸ್ಥಗಿತಗೊಂಡಿರುವುದರಿಂದ ಔಷಧೋಪಚಾರ, ಚಿಕಿತ್ಸೆ, ಪ್ರಯಾಣ ವೆಚ್ಚ ಸೇರಿದಂತೆ ದೈನಂದಿನ ಅಗತ್ಯಗಳನ್ನು ಪೂರೈಸುವುದೇ ಕಷ್ಟಕರವಾಗಿದೆ. ತಿಂಗಳಿಗೆ ಕೇವಲ 2,700 ರೂ. ಆದಾಯವನ್ನು ಕುಟುಂಬದ ಆದಾಯ ಮಿತಿಯಾಗಿ ಪರಿಗಣಿಸಿರುವುದು ಅವೈಜ್ಞಾನಿಕ ಹಾಗೂ ಹಾಸ್ಯಾಸ್ಪದವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬಿಪಿಎಲ್ ಪಡಿತರ ಚೀಟಿಗೆ ವಾಷಿರ್ಕ 1.20 ಲಕ್ಷ ರೂ. ಆದಾಯ ಮಿತಿ ನಿಗದಿಪಡಿಸಿರುವ ಸರ್ಕಾರ, ಅಂಗವಿಕಲರ ಮಾಸಾಶನಕ್ಕೆ ಮಾತ್ರ 32 ಸಾವಿರ ರೂ. ಮಿತಿಯನ್ನು ವಿಧಿಸಿರುವುದು ನ್ಯಾಯಸಮ್ಮತವಲ್ಲ. ಅಂಗವಿಕಲರು ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ಅವಕಾಶಗಳಿಂದ ವಂಚಿತರಾಗಿರುವ ಹಿಂದುಳಿದ ಸಮುದಾಯವಾಗಿದ್ದು, ಅವರಿಗೆ ನೀಡುವ ಮಾಸಾಶನವು ಕೇವಲ ಕಲ್ಯಾಣ ಯೋಜನೆಯಲ್ಲ. ಗೌರವಯುತ ಜೀವನ ನಡೆಸುವ ಹಕ್ಕಿನ ಭಾಗವಾಗಿದೆ.

ವಿಶ್ವಸಂಸ್ಥೆಯ ಅಂಗವಿಕಲರ ಹಕ್ಕುಗಳ ಒಪ್ಪಂದ, ಅವರ ಹಕ್ಕುಗಳ ಕಾಯ್ದೆ -2016 ಕೂಡ ಸಾಮಾಜಿಕ ಭದ್ರತೆಯನ್ನು ಖಾತರಿಪಡಿಸುವಂತೆ ಸರ್ಕಾರಗಳಿಗೆ ಹೊಣೆಗಾರಿಕೆ ವಿಧಿಸಿವೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿ ಅಂಗವಿಕಲರ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಹೆಚ್ಚು ವಾಸ್ತವಿಕ ಆದಾಯ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಅವೈಜ್ಞಾನಿಕ ಆದಾಯ ಮಿತಿಯನ್ನು ರದ್ದುಪಡಿಸಿ, ಕನಿಷ್ಠ ಬಿಪಿಎಲ್ ಪಡಿತರ ಚೀಟಿಗೆ ಅನ್ವಯಿಸುವ ವಾಷಿರ್ಕ 1.20 ಲಕ್ಷ ರೂ. ಆದಾಯ ಮಿತಿಯನ್ನು ಅಂಗವಿಕಲರ ಮಾಸಾಶನಕ್ಕೂ ಅನ್ವಯಿಸಬೇಕು. ಜೊತೆಗೆ ಮಾಸಾಶನವನ್ನು ತಿಂಗಳಿಗೆ 10 ಸಾವಿರ ರೂ.ಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್., ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಹಸೀನಾ ಹೆಡಿಯಾಲ, ಖಲಂದರ್ ಅಲ್ಲಿಗೌಡ್ರ, ಗಿರಿಜಾ ಗೌಳಿ, ಬಸಪ್ಪ ಮಲ್ಲಪ್ಪನವರ, ಪುಟ್ಟವ್ವ ಕಲ್ಲೇದೇವರ, ಅಕ್ಕಮ್ಮ ಲಮಾಣಿ, ಖುತೇಜಾ ನದಾಫ್, ಪಂಡಿತ ಫಕ್ಕೀರಪ್ಪ, ಪರ್ವತಗೌಡ ಕರೇಗೌಡ್ರು ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net