

ರಾಣೆಬೆನ್ನೂರ: ಸಮಾಜದಲ್ಲಿ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಸೇರಿ ಎಲ್ಲ ದಾರ್ಶನಿಕರ ಮೂರ್ತಿಗಳ ಪ್ರತಿಷ್ಠಾಪನೆ ಮಾಡುವ ಮೂಲಕ ಇಂದಿನ ಮಕ್ಕಳಿಗೆ ಅವರ ತತ್ವಾದರ್ಶಗಳ ಕುರಿತು ಅರಿವು ಮೂಡಿಸಬೇಕು. ಆ ಮೂಲಕ ಮಕ್ಕಳನ್ನು ಸಮಾಜದಲ್ಲಿ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದ ಮಹಷಿರ್ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಷ್ಠಾಪಿಸಿದ ವೀರಮದಕರಿ ನಾಯಕನ ಮೂತಿರ್ಯನ್ನು ಸೋಮವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
ಯಾವ ಮಕ್ಕಳು ಇತಿಹಾಸ ಓದಿ ತಿಳಿದುಕೊಳ್ಳುತ್ತಾರೋ ಅವರು ಇತಿಹಾಸ ಸೃಷ್ಟಿಸುತ್ತಾರೆ. ವೀರಮದಕರಿ ನಾಯಕ ಸೇರಿ ಎಲ್ಲ ದಾರ್ಶನಿಕರು ನಿಮಗೆಲ್ಲ ದಾರಿದೀಪವಾಗಬೇಕು. ಎಲ್ಲ ಸಮಾಜದ ಜನತೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದಲ್ಲಿ ಶಿಕ್ಷಣ ಮಹತ್ವ ಹೆಚ್ಚಿಸಲು ವಸತಿ ಶಾಲೆಗಳನ್ನು ತೆರೆಯಲಾಗಿದೆ. ಅವುಗಳ ಬಳಕೆ ಮಾಡಿಕೊಳ್ಳಬೇಕು.
ಸ್ವಾತಂರ್ತ್ಯ ಪೂರ್ವ ಇಲ್ಲದ ಶಿಕ್ಷಣವನ್ನು ಸಂವಿಧಾನ ಬಂದ ಮೇಲೆ ಶಿಕ್ಷಣ ಕಲಿಯಲು ಅವಕಾಶ ಎಲ್ಲರಿಗೂ ದೊರೆತಿದೆ. ಮಠಗಳ ಮೂಲಕವೂ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ನಡೆಯುತ್ತಿದೆ. ವಾಲ್ಮೀಕಿ ಸಮಾಜದಿಂದಲೂ ತಿಂಥಣಿಯಲ್ಲಿ 18 ಎಕರೆ ಜಾಗದಲ್ಲಿ ಮಠ ನಿಮಿರ್ಸಲಾಗುತ್ತಿದ್ದು, ಇದರ ಉದ್ದೇಶ ಮಕ್ಕಳಿಗೆ ಶಿಕ್ಷಣ ಕೊಡುವುದಾಗಿದೆ ಎಂದರು.
ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಬಿಜೆಪಿ ಎಸ್ಟಿ ಮೋರ್ಚಾದ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಎಸ್ಟಿಯವರಿಗೆ ಶೇ. 7ರಷ್ಟು ಮೀಸಲಾತಿ ನೀಡಿತ್ತು. ಆದರೀಗ ಉದ್ಯೋಗದಲ್ಲಿ ಕೇವಲ ಶೇ. 3ರಷ್ಟು ಮಾತ್ರ ನೀಡಲಾಗುತ್ತಿದೆ. ಆದ್ದರಿಂದ ಸಚಿವ ಸತೀಶ ಜಾರಕಿಹೊಳಿಯವರು ಉದ್ಯೋಗದಲ್ಲೂ ಶೇ. 7ರಷ್ಟು ಮೀಸಲಾತಿ ಕೊಡಲಿಸಲು ಪ್ರಯತ್ನಿಸಬೇಕು ಎಂದು ಒತ್ತಾಯಿಸಿದರು.
ಪುಣ್ಯಕೋಟಿ ಮಠದ ಬಾಲ ಜಗದೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಪ್ರಕಾಶ ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು.
ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ, ಮಹಷಿರ್ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಚಂದ್ರು ಬನ್ನಿಹಟ್ಟಿ, ಸಂತೋಷಕುಮಾರ ಪಾಟೀಲ, ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಮೀನಕಟ್ಟಿ, ರವೀಂದ್ರಗೌಡ ಪಾಟೀಲ, ದರ್ಶನ ಲಮಾಣಿ, ಏಳುಕೋಟೆಪ್ಪ ಬ್ಯಾಡಗಿ, ಮಂಜುನಾಥ ಓಲೇಕಾರ, ಬಸವರಾಜ ಚಳಗೇರಿ, ಪುಟ್ಟಪ್ಪ ಮರಿಯಮ್ಮನವರ ಹಾಗೂ ವಾಲ್ಮೀಕಿ ಸಮಾಜದ ಜಿಲ್ಲಾ, ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.