ಆನ್ ಲೈನ್ ಔಷಧ ಮಾರಾಟ ಬಂದ್ ಮಾಡಲು ಆಗ್ರಹ

ಪ್ರತಿಭಟನೆ
ಪ್ರತಿಭಟನೆ
Published on

ರಾಣೆಬೆನ್ನೂರು: ಆನ್ಲೈನ್ ಮೂಲಕ ನಡೆಯುತ್ತಿರುವ ಔಷಧ ಮಾರಾಟವನ್ನು ಸಂರ್ಪೂಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿ ಇಲ್ಲಿಯ ಔಷಧ ಮಾರಾಟಗಾರರು ಬುಧವಾರ ಔಷಧ ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ನಗರದ ಬಸ್ ನಿಲ್ದಾಣದಿಂದ ಪ್ರತಿಭಟನೆ ಮೆರವಣಿಗೆ ಆರಂಭಿಸಿದ ಮಾರಾಟಗಾರರು ತಹಸೀಲ್ದಾರ್ ಕಚೇರಿಗೆ ತಲುಪಿದರು. ಆನ್ಲೈನ್ ಔಷಧ ಮಾರಾಟ ಸಂರ್ಪೂಣ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ನೇತೃತ್ವ ವಹಿಸಿದ್ದ ಔಷಧ ಮಾರಾಟಗಾರ ಹಾಗೂ ನಗರಸಭೆ ಮಾಜಿ ಸದಸ್ಯ ಮಲ್ಲಣ್ಣ ಅಂಗಡಿ ಮಾತನಾಡಿ, ಸರ್ಕಾರ ರೂಪಿಸಿರುವ ನಿಯಮಗಳ ಅನ್ವಯ ಪರವಾನಗಿ ಪಡೆದು, ಇಲಾಖೆಯ ನಿಯಂತ್ರಣಕ್ಕೆ ಒಳಪಟ್ಟು ಔಷಧ ಅಂಗಡಿಗಳನ್ನು ನಡೆಸುತ್ತಿದ್ದೇವೆ. ರೋಗಿಗಳು ಹಾಗೂ ಜನರ ಆರೋಗ್ಯದ ಕಾಳಜಿ ಮಾಡುತ್ತಿದ್ದೇವೆ.

ಅಪಾಯಕಾರಿ ಔಷಧಗಳನ್ನು ಅತಿಯಾಗಿ ತೆಗೆದುಕೊಳ್ಳುವ ಜನರಿಗೂ ತಿಳಿವಳಿಕೆ ಮೂಡಿಸುತ್ತಿದ್ದೇವೆ. ನಿಷೇಧಿತ ಔಷಧಗಳ ಮಾರಾಟ ಬಂದ್ ಮಾಡಿದ್ದೇವೆ. ಆದರೆ, ಇಷ್ಟೆಲ್ಲ ನಿಯಮಗಳನ್ನು ಆನ್ಲೈನ್ ಔಷಧ ಮಾರಾಟಗಾರರು ಪಾಲಿಸುತ್ತಿಲ್ಲ. ನಿಷೇಧಿತ ಡ್ರಗ್ಸ್ಗಳನ್ನು ಹಾಗೂ ಅನಿಯಮಿತ ಔಷಧಗಳನ್ನು ಬೇಕಾಬಿಟ್ಟಿಯಾಗಿ ಕೊಡುತ್ತಿದ್ದಾರೆ. ಅವರ ಮಾರಾಟಕ್ಕೆ ನಿಯಂತ್ರಣವೇ ಇಲ್ಲದಂತಾಗಿದೆ. ಇದು ಜನರ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ಇದೇ ಕಾರಣಕ್ಕೆ ಆನ್ಲೈನ್ ಮಾರಾಟವಾಗಿದೆ.

ಕೋವಿಡ್ ಸಂದರ್ಭದಲ್ಲಿ ಕೋರಿಯರ್ ಮೂಲಕ ಔಷಧ ಮಾರಾಟಕ್ಕಾಗಿ ಸರ್ಕಾರ ಸುತ್ತೋಲೆ ಹೊರಡಿಸಿತ್ತು. ಅದೊಂದೇ ಅವಕಾಶ ಬಳಸಿಕೊಂಡು ದೊಡ್ಡ ಕಂಪನಿಗಳು ಸಹ ಔಷಧ ಮಾರುತ್ತಿವೆ. ನಿಗದಿಗಿಂತಲೂ ಹೆಚ್ಚಿನ ರಿಯಾಯಿತಿ ನೀಡಿ, ಗ್ರಾಹಕರ ದಿಕ್ಕು ತಪ್ಪಿಸುತ್ತಿವೆ. ಅವರು ಮಾರುತ್ತಿರುವುದು ಅಸಲಿಯೋ ಅಥವಾ ನಕಲಿಯೋ ಎಂಬುದನ್ನು ಪರಿಶೀಲಿಸಲು ಸಹ ಯಾರೂ ಇಲ್ಲವಾಗಿದೆ. ಇಂಥ ಮಾರಾಟವನ್ನು ನಿಷೇಧಿಸಲು ಕೇಂದ್ರ ಸರ್ಕಾರ ಕಾಯ್ದೆ ರೂಪಿಸಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ರಾಜಣ್ಣ ಇರಕಲ್ಲ, ಮಲ್ಲಣ್ಣ ಅಂಗಡಿ, ಅಮೃತ ಇರಕಲ್ಲ, ದೀಪಕ ಸಾಮಂತ್ರಿ, ಮಹೇಶ ಭಂಡಾರಿ, ಸತೀಶ ಕೇಲಗಾರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net