ಹಾನಗಲ್ಲ: ಮಾನವನ ಉಸಿರು ಉಳಿಯಬೇಕಾದರೆ ಪರಿಸರ ಹಸಿರಾಗಿರಬೇಕು. ಹೊಗೆ ರಹಿತ ಜೀವನಕ್ಕೆ ಮುಂದಾಗಬೇಕೆಂದರೆ ಇದರಲ್ಲಿ ಪ್ರತಿ ಪ್ರಜೆಯ ಜವಾಬ್ದಾರಿಯೂ ಅತಿ ಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ.ಚಿನ್ನೀಕಟ್ಟಿ ಹೇಳಿದರು.
ಇಲ್ಲಿನ ಗುರುಭವನದಲ್ಲಿ ಭಾರತ ಜ್ಞಾನವಿಜ್ಞಾನ ಸಮಿತಿ, ಪರಿವರ್ತನ ಕಲಿಕಾ ಕೇಂದ್ರ ಸಂಯುಕ್ತವಾಗಿ ಶುಕ್ರವಾರ ಆಯೋಜಿಸಿದ್ದ ಜಾಗತಿಕ ತಾಪಮಾನ ಹಾಗೂ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಾಳೆಗಾಗಿ ಇಂದೇ ಯೋಜನೆ ಯೋಚನೆ ಮಾಡಿ ಜೀವನ ನಿರ್ವಹಣೆ ಮಾಡುವ ಅಗತ್ಯವಿದೆ. ಸರ್ವ ಕಾಲಕ್ಕೂ ಸಲ್ಲುವ ಪರಿಸರ environmental ಪ್ರಜ್ಞೆ ಬೇಕು. ಭವಿಷ್ಯದ ಅರಿವಿಲ್ಲದೆ ಕಾಡು ಕಡಿದು, ವಾತಾವರಣವನ್ನು ಕಲುಷಿತಗೊಳಿಸಿದರೆ ನಾಳೆ ನಾವೇ ಪಶ್ಚಾತ್ತಾಪ ಪಡುವ ಕಾಲ ಬರಲಿದೆ ಎಂದರು.
ಡಾ.ಎಂ.ಪ್ರಸನ್ನಕುಮಾರ ಮಾತನಾಡಿ, ನಾವು ಬದುಕಲು ನಮ್ಮ ಪರಿಸರ ಉಳಿಬೇಕು. ಪರಿಸರದ ಅಸಮತೋಲನದಿಂದಾಗಿಯೇ ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಚಂಡಮಾರುತಗಳಂತಹ ವಿಕೋಪಗಳಿಗೆ ತುತ್ತಾಗುತ್ತಿದ್ದೇವೆ. ಪರಿಸರವನ್ನು ಹಾಳು ಮಾಡಿ ಮಾನವ ಕುಲ ಸಾವಿನ ಕಡೆಗೆ ಮುಖ ಮಾಡುತ್ತಿದೆ. ಈಗಲಾದರೂ ಎಚ್ಚರಗೊಳ್ಳದಿದ್ದರೆ ಇಡೀ ಮಾನವ ಕುಲವೇ ನಾಶವಾಗುವ ಎಲ್ಲ ಲಕ್ಷಣಗಳು ನಮ್ಮ ಮುಂದಿವೆ ಎಂದರು.
ನಿವೃತ್ತ ಉಪನ್ಯಾಸಕ ಮಾರುತಿ ಶಿಡ್ಲಾಪೂರ ಮಾತನಾಡಿ, ಬದಲಾದ ಕಾಲಕ್ಕೆ ಕಾಡು ಮೇಡುಗಳನ್ನು ಹಾಳು ಮಾಡುವ ಮನಸ್ಥಿತಿಯಿಂದ ಹೊರಬರುವ ಅನಿವಾರ್ಯತೆ ಎದುರಾಗಿದೆ. ಮಾನವ ಕುಲದ ಒಳಿತಿನಲ್ಲಿ ನನ್ನ ಪಾಲು ಇದೆ ಎಂಬ ಎಚ್ಚರಿಕೆ ಬೇಕು. ಮಕ್ಕಳಿಗೆ ಈಗಲೇ ಪರಿಸರದ ಅಗತ್ಯ, ಕಾಪಾಡುವ ಅನಿವಾರ್ಯತೆಯನ್ನು ಮನವರಿಕೆ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನವಿಜ್ಞಾನ ಸಮಿತಿ ತಾಲೂಕು ಅಧ್ಯಕ್ಷ ಎಸ್.ವಿ.ಹೊಸಮನಿ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಸಭೆ ಸಮಾರಂಭಗಳಲ್ಲಿ ಈಗ ಪ್ರಕೃತಿಯ ರಕ್ಷಣೆಗೆ ಘೋಷಣೆ ಮೊಳಗಬೇಕು. ನೀರು ಭೂಮಿ ಪರಿಸರ ಉಳಿಸುವ ಕಾಳಜಿ ಕಾರ್ಯರೂಪಕ್ಕೆ ಬರಬೇಕು. ಪ್ರಾಥಮಿಕ ಹಂತದಲ್ಲಿಯೇ ಪರಿಸರ ಸಂರಕ್ಷಣೆ ಶಿಕ್ಷಣ ನೀಡುವ ಅಗತ್ಯವಿದೆ ಎಂದರು.
ಶಿಕ್ಷಣ ಸಂಯೋಜಕ ಬಿ.ಎನ್. ಸಂಗೂರ, ಭಾರತ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಸಂಚಾಲಕಿ ರೇಣುಕಾ ಗುಡಿಮನಿ, ಶಿಕ್ಷಕ ಪ್ರದೀಪಕುಮಾರ, ಎಂ.ಎಂ. ಹೋತನಹಳ್ಳಿ, ಮಹೇಶ ಹನಕೇರಿ, ರಮೇಶ ಗೂರನವರ, ಎಸ್.ಎಫ್. ಕಠಾರಿ, ಎಚ್. ಸುಧಾ, ಜ್ಯೋತಿ ಸುರಳೇಶ್ವರ, ಮಧುಮತಿ ಅಪ್ಪಣ್ಣನವರ ಪಾಲ್ಗೊಂಡಿದ್ದರು.