

ರಾಣೆಬೆನ್ನೂರ: ಜಮೀನಿನಲ್ಲಿ ರಾಶಿ ಹಾಕಿದ್ದ 3.50 ಲಕ್ಷ ರೂ. ಮೌಲ್ಯದ ಮೆಕ್ಕೆಜೋಳದ ತೆನೆಗಳನ್ನು ಕಳ್ಳತನ ಮಾಡಿದ ಘಟನೆ ತಾಲೂಕಿನ ಕುಪ್ಪೇಲೂರ ಗ್ರಾಮದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ 5 ಜನರ ವಿರುದ್ಧ ಹಲಗೇರಿ ಪೊಲೀಸ್ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.
ಗ್ರಾಮದ ಚಂದ್ರಗೌಡ ಪಾಟೀಲ, ವೀರನಗೌಡ ಪಾಟೀಲ, ಸರೋಜಾ ಪಾಟೀಲ, ವಿನಾಯಕ ಪಾಟೀಲ ಹಾಗೂ ಮಂಜುನಾಥ ರಾಮಲಿಂಗಣ್ಣನವರ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ನಗರದ ಕೋಟೆ ಓಣಿಯ ವಾದಿರಾಜ ಗಲಿಗಲಿ ಎಂಬುವರು ಇವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿತರು ನಮ್ಮ ಜಮೀನಿನಲ್ಲಿ ಬೆಳೆದು ತೆನೆ ರಾಶಿ ಹಾಕಿದ್ದ ಸಮಯದಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.