

ರಾಣೆಬೆನ್ನೂರು: ಅಕ್ರಮವಾಗಿ ದಾಸ್ತಾನು ಮಾಡಿದ್ದ 18 ಕ್ವಿಂಟಾಲ್ ಖುಲ್ಲಾ ಮೆಕ್ಕೆಜೋಳ ಬೀಜಗಳನ್ನು ಕೃಷಿ ಅಧಿಕಾರಿಗಳು ವಶಪಡಿಸಿಕೊಂಡ ಟನೆ ತಾಲೂಕಿನ ಗುಡ್ಡದಬೇವಿನಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಗ್ರಾಮದ ಭರಮಪ್ಪ ಅಡಿವೆಪ್ಪ ನಂದಿಗಾವಿ ಎಂಬುವರ ಮನೆಯಲ್ಲಿ ಅಕ್ರಮವಾಗಿ ಖುಲ್ಲಾ ಮೆಕ್ಕೆಜೋಳ ಬೀಜ ದಾಸ್ತಾನು ಮಾಡಲಾಗಿತ್ತು. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಇಲ್ಲಿಯ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಹಾಗೂ ತಂಡದವರು 50 ಕೆ.ಜಿ. ತೂಕದ 36 ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷಿ ಅಧಿಕಾರಿಗಳಾದ ಬಸವರಾಜ ಮರಗಣ್ಣನವರ, ಅರವಿಂದ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.
ತಾಲೂಕಿನಲ್ಲಿ ಇತ್ತೀಚಿಗೆ ಕಳಪೆ ಬಿತ್ತನೆ ಬೀಜಗಳ ಮಾರಾಟದ ಹಾವಳಿ ಹೆಚ್ಚಾಗಿದ್ದು, ಈ ರೀತಿಯ ಅನಧಿಕೃತವಾಗಿ ಬಿತ್ತನೆ ಬೀಜಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಇವು ಕಳಪೆ ಗುಣಮಟ್ಟದ್ದಾಗಿದ್ದು, ರೈತರು ಮೋಸ ಹೋಗದೆ ಉತ್ತಮ ಗುಣಮಟ್ಟದ ನಿಜ ಚೀಟಿ ಹೊಂದಿರುವ ಬಿತ್ತನೆ ಬೀಜಗಳನ್ನು ಅಧೀಕೃತ ಮಾರಾಟ ಕೇಂದ್ರಗಳಲ್ಲಿಯೇ ಖರೀದಿಸಿ ಲಾಟ್ ನಂಬರಿನೊಂದಿಗೆ ಬಿಲ್ ಹಾಕಿಸಿಕೊಂಡು ಬಳಕೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ತಿಳಿಸಿದ್ದಾರೆ.