ಪಟ್ಟಣದ ಸಾರ್ವಜನಿಕರು ಕಸವನ್ನು ಹಸಿಕಸ, ಒಣಕಸ, ಸ್ಯಾನಿಟರಿ, ಔಷಷ ಸೇರಿದಂತೆ ವಿಶೇಷ ಬಗೆಗಳ ಕಸವನ್ನು ವಿಭಜಿಸಿ ಪುರಸಭೆ ಕಸ ವಿಲೇವಾರಿ ವಾಹನಕ್ಕೆ ನೀಡಿದರೆ ಸಹಕಾರಿಯಾಗುತ್ತದೆ. ಕಸ ವಿಲೇವಾರಿ ಘಟಕದಲ್ಲಿ ಕಾಂಪೋಸ್ಟ್ ಘಟಕವೂ ಇದ್ದು, ಇದರಿಂದ ಒಂದು ವರ್ಷಕ್ಕೆ ಕನಿಷ್ಟ 20 ಸಾವಿರ ರೂ. ಆದಾಯ ಬರುತ್ತದೆ. ಪ್ರತಿ ಕ್ವಿಂಟಾಲ್ ಎರೆಹುಳು ಕಾಂಪೋಸ್ಟ್ ಗೊಬ್ಬರವನ್ನು 500 ರೂ.ಗಳಿಗೆ ಮಾರಾಟ ಮಾಡಲಾಗುತ್ತದೆ. ಇದಕ್ಕೆ ರೈತರಿಂದ ಬಹು ಬೇಡಿಕೆಯೂ ಇದೆ. ಇದರೊಂದಿಗೆ ಮದ್ಯದ ಖಾಲಿ ಬಾಟಲಿ, ಪ್ಲಾಸ್ಟಿಕ್, ರಟ್ಟು, ಕಬ್ಬಿಣದಂತಹ ವಸ್ತುಗಳ ಮಾರಾಟದಿಂದ ವರ್ಷಕ್ಕೆ ಅಂದಾಜು 2 ಲಕ್ಷ ರೂ. ಆದಾಯವಿದೆ. ಸಿಬ್ಬಂದಿ ಕೊರತೆ ಇರುವುದರಿಂದ ಕಸವನ್ನು ವಿಂಗಡಿಸಿ ಕೊಡಿ ಎಂಬುದು ಸಾರ್ವಜನಿಕರಿಗೆ ಪುರಸಭೆ ಸಿಬ್ಬಂದಿ ಮಾಡುತ್ತಿದ್ದಾರೆ. ಸ್ವತಃ ಪುರಸಭೆ ಮುಖ್ಯಾಧಿಕಾರಿ ವೈ.ಕೆ.ಜಗದೀಶ ಅವರು ಪುರಸಭೆ ಪೌರ ಕಾರ್ಮಿಕರೊಂದಿಗೆ ಬೆಳಗ್ಗೆ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.