

ಹಾವೇರಿ: ತಾಲೂಕಿನ ಗುತ್ತಲ ಪಟ್ಟಣದ ದೊಡ್ಡ ಕೆರೆ ಹಾಗೂ ಸಣ್ಣ-ದೊಡ್ಡ ಹೊಂಡಗಳಿಗೆ ಸೋಮವಾರ ಬೆಳಗ್ಗೆ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ.ಎಸ್. ಪಾಟೀಲ ಹಾಗೂ ಬಿ. ವೀರಪ್ಪ ಭೇಟಿ ನೀಡಿ ಪರಿಶೀಲಿಸಿದರು.
ಪರಿಶೀಲನೆ ವೇಳೆ ಕೆರೆ ಹಾಗೂ ಹೊಂಡಗಳ ಜಾಗದಲ್ಲಿ ಅತಿಕ್ರಮಣ ಕಂಡುಬಂದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಪ ಲೋಕಾಯುಕ್ತರು, ಅತಿಕ್ರಮಣಗಳನ್ನು ಕೂಡಲೇ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು. ಸಾರ್ವಜನಿಕ ಆಸ್ತಿಗಳ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರಕರಣ ದಾಖಲಿಸುವಂತೆ ಸೂಚಿಸಿದರು.
ಕೆರೆ ಹಾಗೂ ಹೊಂಡಗಳ ಅತಿಕ್ರಮಣಕ್ಕೆ ಸಂಬಂಧಿಸಿದಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಾ ಕಟ್ಟಿಮನಿ ಹಾಗೂ ಕಿರಿಯ ಎಂಜಿನಿಯರ್ ಸುರೇಶ ಚಲವಾದಿ ಅವರ ವಿರುದ್ಧ ಸ್ವಯಂ ಪ್ರಕರಣ ದಾಖಲಿಸುವಂತೆ ಉಪ ಲೋಕಾಯುಕ್ತರು ಸೂಚನೆ ನೀಡಿದರು.
ಸಾರ್ವಜನಿಕ ಬಳಕೆಯಲ್ಲಿರುವ ಕೆರೆ, ಹೊಂಡ ಸೇರಿದಂತೆ ಸರ್ಕಾರಿ ಜಾಗಗಳನ್ನು ಅತಿಕ್ರಮಣದಿಂದ ರಕ್ಷಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.