ಮಾಂಸ ತ್ಯಜಿಸಿದರೆ ಬಾಳು ಬಂಗಾರ

ಜಗದ್ಗುರು ಡಾ. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅಭಿಮತ
Former Minister R. Shankar inaugurated the Taluk Kuruba Employees' Convention, the presentation of talent awards, and a felicitation ceremony for high achievers, held in Ranebennur. Jagadguru Dr. Sri Niranjananandapuri Swamiji of the Kaginele Kanaka Gurupeetha, Dr. Praveena Khannura, Subhashchandra Kurubara, and Dr. Honnappa Honnappanavara were present.
ರಾಣೆಬೆನ್ನೂರಿನಲ್ಲಿ ಆಯೋಜಿಸಿದ್ದ ತಾಲೂಕು ಕುರುಬ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಮಾಜಿ ಸಚಿವ ಆರ್.ಶಂಕರ್ ಉದ್ಘಾಟಿಸಿದರು. ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಡಾ. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಡಾ. ಪ್ರವೀಣ ಖನ್ನೂರ, ಸುಭಾಶ್ಚಂದ್ರ ಕುರುಬರ, ಡಾ.ಹೊನ್ನಪ್ಪ ಹೊನ್ನಪ್ಪನವರ ಇದ್ದರು.
Published on: 

ರಾಣೆಬೆನ್ನೂರು: ಕನಕದಾಸರು, ಸಂಗೋಳ್ಳಿ ರಾಯಣ್ಣ, ಬೀರಪ್ಪ, ರೇವಣಸಿದ್ದಯ್ಯ, ಮಾಳಿಗರಾಯ ಮುಂತಾದ ದಾರ್ಶನಿಕರು ಬಳಕೆಯಾದರು ಬೆಳಕಾಗಲಿಲ್ಲ. ಅವರ ಹೆಸರು ಬಳಸಿಕೊಂಡು ನಾವು ಬೆಳೆಯುತ್ತಿದ್ದೇವೆ ಹೊರತು ಅವರ ತತ್ವ ಸಿದ್ದಾಂತ ಬೆಳೆಸಲಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಡಾ. ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನ (ಹೊರಗುಡಿ) ಆವರಣದಲ್ಲಿ ಭಾನುವಾರ ತಾಲೂಕು ಕುರುಬ ನೌಕರರ ಸಂಘ, ಪ್ರದೇಶ ಕುರುಬರ ಸಂಘದ ತಾಲೂಕ ಘಟಕ ಮತ್ತು ಸಮಾಜದ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಭಕ್ತ ಶ್ರೇಷ್ಠ ಶ್ರೀ ಕನಕದಾಸರ 539ನೇ ಜಯಂತ್ಯುತ್ಸವ ಅಂಗವಾಗಿ ಏರ್ಪಡಿಸಿದ್ದ ತಾಲೂಕು ಕುರುಬ ನೌಕರರ ಸಮಾವೇಶ, ತಾಲೂಕು ಮಟ್ಟದ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮೌಢ್ಯತೆಯ ಪ್ರತೀಕವಾಗಿರುವ ಮಾಂಸಾಹಾರ ಹಬ್ಬಗಳಿಗೆ ಬ್ರೇಕ್ ಹಾಕಿ ಅವುಗಳಿಂದ ಹೊರಗೆ ಬಂದಾಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ. ಹಾಲುಮತ ಪರಂಪರೆಯಲ್ಲಿ ಕುರಿಗಳು ಲಕ್ಷ್ಮೀ ಇದ್ದಂತೆ. ಅವುಗಳನ್ನು ನಾವೇ ಸಾಕಿ ಅದನ್ನು ಕಡಿಯುವುದು ಸರಿಯಲ್ಲ. ದುಡ್ಡನ್ನು ದೇವರ ಹೆಸರುಗಳಲ್ಲಿ ಹಾಳು ಮಾಡಿದರೆ ನಾವು ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು ಯಾವಾಗ? ನಮ್ಮ ಖಜಾನೆ ಸುಭದ್ರವಾಗಿರಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಏಳಿಗೆ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಸಮಾಜದ ಜನರು ಕನಿಷ್ಠ ಜ್ಞಾನ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜ ಮುನ್ನೆಲೆಗೆ ಬರುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಆರ್. ಶಂಕರ್ ಮಾತನಾಡಿ, ಸಮಾಜದ ವಿದ್ಯಾರ್ಥಿಗಳು ಪ್ರತಿಭಾವಂತರಾಗಬೇಕು. ತುಳಿತಕ್ಕೆ ಒಳಗಾದ ಸಮಾಜದ ಅಂಕು ಡೊಂಕು ತಿದ್ದಿ ಸರಿದಾರಿಗೆ ತಂದ ಶ್ರೇಯಸ್ಸು ಕಾಗಿನೆಲೆ ಶ್ರೀಗಳಿಗೆ ಸಲ್ಲುತ್ತದೆ. ಅವರು ಸಮಾಜಕ್ಕೆ ಎಸ್.ಟಿ. ಸ್ಥಾನ ಕೊಡಿಸಲು ಹೋರಾಟ ನಡೆಸಿ ಸಮಾಜವನ್ನು ಮುನ್ನೆಲೆಗೆ ತರಲು ಶ್ರಮಿಸಿದರು. ದೇವಸ್ಥಾನ ಕಟ್ಟುವ ಮೊದಲು ಶಾಲೆಯ ನಿರ್ಮಾಣ ಮಾಡಬೇಕು. ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ದೇವಸ್ಥಾನಗಳನ್ನು ಸ್ಥಾಪನೆ ಮಾಡಲಾಗಿದೆ. ಸಮಾಜದ ಮಕ್ಕಳ ಭವಿಷ್ಯದ ಅನುಕೂಲತೆಗೆ ಶಾಲೆಗಳ ನಿರ್ಮಾಣ ಅವಶ್ಯ ಎಂದರು.

ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರವೀಣ ಖನ್ನೂರ ಮಾತನಾಡಿ, ಪಾಲಕರು, ಶಿಕ್ಷಕರು ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು. ಮನೆಯಲ್ಲಿ ಶಿಕ್ಷಣಕ್ಕೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಪ್ರತಿಭಾ ಪುರಸ್ಕಾರ ಒಂದು ಮೈಲಿಗಲ್ಲು ಮಾತ್ರ. ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ ಕಲಿಯಬೇಕು ಎಂದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ, ಪಿಎಸ್‌ಐ ಕೆ.ವೈ. ನಿಂಗರಾಜ ಮಾತನಾಡಿದರು. ತಾಲೂಕು ಕುರುಬ ನೌಕರರ ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಕುರುಬರ ಅಧ್ಯಕ್ಷತೆ ವಹಿಸಿದ್ದರು. ಡಾ.ಹೊನ್ನಪ್ಪ ಹೊನ್ನಪ್ಪನವರ ಉಪನ್ಯಾಸ ನೀಡಿದರು. ನಿವತ್ತ ಇಂಜಿನಿಯರ್ ವಿಜಯಕುಮಾರ ಮುದಕಣ್ಣನವರ, ಬೆಂಗಳೂರಿನ ಕುರಿ ಮತ್ತು ಉಣ್ಣೆ ನಿಗಮದ ಉಪಾಧ್ಯಕ್ಷ ಡಿಳ್ಳೆಪ್ಪ ಅಣ್ಣೇರ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಆನ್ವೇರಿ, ಅಬಕಾರಿ ನಿರೀಕ್ಷಕ ಶಿವಯ್ಯ, ಕನಕ ಪ್ರಶಸ್ತಿ ಪುರಸ್ಕೃತ ಡಾ.ಎನ್.ಎಂ.ಅಂಬಲಿಯವರ, ಪಿಎಸ್‌ಐ ನೀಲಪ್ಪ ನರಲಾರ, ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ.ಬೀರೇಶ ಬೇವಿನಮರದ, ತಾಲೂಕು ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಹನುಮಂತಪ್ಪ ದೇವರಗುಡ್ಡ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ಕಾರ್ಯದರ್ಶಿ ಮರಡೆಪ್ಪ ಕಂತಿ, ಹುಚ್ಚಪ್ಪ ಮೇಡ್ಲೇರಿ, ಕೃಷ್ಣಪ್ಪ ಕಂಬಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net