ಹಾನಗಲ್ಲ: ಸರ್ಕಾರಿ ಆಸ್ತಿಗಳ ಸಂರಕ್ಷಣೆಯಲ್ಲಿ ಇಲಾಖೆಗಳ ನಿರ್ಲಕ್ಷ್ಯ, ಅಧಿಕಾರಿಗಳ ನಡುವಿನ ಸಮನ್ವಯದ (Officers coordinate) ಕೊರತೆ ಮತ್ತು ಸಾರ್ವಜನಿಕ ಸೇವೆಗಳಲ್ಲಿನ ಹಿನ್ನಡೆ ಸರಿಪಡಿಸಿಕೊಳ್ಳುವಂತೆ ಶಾಸಕ ಶ್ರೀನಿವಾಸ ಮಾನೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯು ತಾಲೂಕಿನ ಜ್ವಲಂತ ಸಮಸ್ಯೆಗಳ ಕುರಿತ ಸುದೀರ್ಘ ಚರ್ಚೆಗೆ ಸಾಕ್ಷಿಯಾಯಿತು.
ಸಭೆಯಲ್ಲಿ ಕೆಡಿಪಿ ಸದಸ್ಯೆ ಅನಿತಾ ಡಿಸೋಜಾ ಮಾತನಾಡಿ, ತಾಲೂಕಿನ ೧೪ ಆಸ್ಪತ್ರೆಗಳಿಗೆ ಕೇವಲ ಇಬ್ಬರು ಸರ್ಕಾರಿ ವೈದ್ಯರಿದ್ದಾರೆ. ಆರೋಗ್ಯ ಇಲಾಖೆಯು ಗ್ರಾಮೀಣ ಭಾಗದಲ್ಲಿ ಸೇವೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಮರ್ಪಕವಾಗಿ ಸಭೆಗಳು ನಡೆಯುತ್ತಿಲ್ಲ. ಸಿಬ್ಬಂದಿ ಕೊರತೆ ಹಾಗೂ ಔಷಧಗಳ ಪೂರೈಕೆಯಿಲ್ಲದೆ ಬಡ ರೋಗಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ವೈದ್ಯಾಧಿಕಾರಿಗಳು ಈ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ದೂರಿದರು.
ಗ್ಯಾರಂಟಿ ಯೋಜನೆ ಸಮಿತಿ ತಾಲೂಕು ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ ಮಾತನಾಡಿ, ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲದಿರುವುದೇ ಸರ್ಕಾರಿ ಆಸ್ತಿಗಳ ನಾಶಕ್ಕೆ ಕಾರಣವಾಗಿದೆ. ರಸ್ತೆ ಬದಿಯಲ್ಲಿ ಗಿಡ ನೆಡುವಾಗ ವಿದ್ಯುತ್ ತಂತಿಗಳ ಬಗ್ಗೆ ಗಮನಹರಿಸದ ಕಾರಣ, ಎರಡು ವರ್ಷಗಳ ನಂತರ ಗಿಡಗಳನ್ನೇ ಕತ್ತರಿಸುವಂತಾಗಿದೆ. ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದ ಧರ್ಮಾ ನದಿಯ ಚೆಕ್ ಡ್ಯಾಂಗಳಿಗೆ ಗೇಟ್ ಅಳವಡಿಸದ ಕಾರಣ ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯಲ್ಲಿ ಸ್ಪಿಂಕ್ಲರ್ ಸಹಾಯಧನಕ್ಕಾಗಿ ೩ ಸಾವಿರ ಅರ್ಜಿಗಳು ಬಾಕಿ ಇವೆ. ಕಂಬಳಗೇರಿ ಕೆರೆ ಬಳಿಯ ಲೇಔಟ್ ಸರ್ವೆ ನಡೆಸಿ ರಸ್ತೆ ಸಮಸ್ಯೆ ಬಗೆಹರಿಸಬೇಕು. ತಹಸೀಲ್ದಾರ್ ಕಚೇರಿ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಿರುವಂತೆ ನೋಡಿಕೊಳ್ಳಬೇಕು. ಬಿಸಿಯೂಟಕ್ಕೆ ತೊಂದರೆಯಾದರೆ ಸಿಆರ್‌ಪಿ ಮತ್ತು ಬಿಆರ್‌ಸಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಹಾಕಬೇಕು ಎಂದು ಒತ್ತಾಯ ಕೇಳಿಬಂದವು.
ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನಸಾಮಾನ್ಯರಿಗೆ ತೊಂದರೆಯಾಗಬಾರದು. ಸಾರ್ವಜನಿಕರಿಂದ ದೂರು ಬರದಂತೆ ಕೆಲಸ ಮಾಡಿ, ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಎಂದು ಎಚ್ಚರಿಸಿದರು.
ಸಭೆಯಲ್ಲಿ ತಹಸೀಲ್ದಾರ್ ಎಸ್. ರೇಣುಕಾ, ಆಡಳಿತಾಧಿಕಾರಿ ಡಾ. ಶಿವಯೋಗಿ ಎಲಿ, ತಾಪಂ ಇಒ ಗಿರೀಶ ರಡ್ಡೇರ, ಗ್ರೇಡ್-೨ ತಹಸೀಲ್ದಾರ್ ವಿಠಲ ಚೌಗುಲಾ, ವಿಜಯಕುಮಾರ ದೊಡ್ಡಮನಿ, ಮಹೇಶ ಬಣಕಾರ, ರಾಜೇಶ ಚವ್ಹಾಣ, ರಾಜಕುಮಾರ ಜೋಗಪ್ಪನವರ, ಮಹ್ಮದಹನಿಫ್ ಬಂಕಾಪೂರ, ಮಾರ್ತಂಡಪ್ಪ ಮಣ್ಣಮ್ಮನವರ, ಪ್ರಕಾಶ ಈಳಿಗೇರ ಇದ್ದರು.