ಸರ್ಕಾರ ನಿಜವಾದ ಕಾರ್ಮಿಕರಿಗೆ ಅನ್ಯಾಯ ಮಾಡ್ತಿದೆ

ಮನವಿ ಸಲ್ಲಿಕೆ
ಮನವಿ ಸಲ್ಲಿಕೆ
Published on

ರಾಣೆಬೆನ್ನೂರ: ವೃತ್ತಿನಿರತ ಕಾರ್ಮಿಕರಿಗೆ ಮದುವೆ ಸಹಾಯಧನ, ವೈದ್ಯಕೀಯ ನೆರವು ಮತ್ತು ಅಂತ್ಯಕ್ರಿಯೆ ನಿರ್ವಹಣೆ ವೆಚ್ಚವನ್ನು ಕಳೆದ ಮೂರು ವರ್ಷಗಳಿಂದ ನೀಡದೆ ಸರ್ಕಾರ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಆರೋಪಿಸಿ ತಾಲೂಕು ಕಾರ್ಮಿಕರು, ವೆಲ್ಡಿಂಗ್ ಮತ್ತು ಇತರ ಕಾರ್ಮಿಕರ ಸಂಘದ ವತಿಯಿಂದ ಸೋಮವಾರ ನಗರದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ಮುಖಂಡ ಅಸ್ಲಾಂ ಫಣಿಬಂದ ಮಾತನಾಡಿ, ಕಾರ್ಮಿಕ ಇಲಾಖೆಯು ಹಿಂದಿನ ದಿನಗಳಲ್ಲಿ ನಿವೃತ್ತ ಕಾರ್ಮಿಕರಿಗೆ ಪಿಂಚಣಿ ನೀಡುತ್ತಿತ್ತು. ಆದರೆ, ಇತ್ತಿಚೆಗೆ ರಾಜ್ಯ ಸರ್ಕಾರ ಕಾರ್ಮಿಕ ಕುಟುಂಬ ಪಿಂಚಣಿ ಸೌಲಭ್ಯ, ನಿವೃತ್ತರಿಗಾಗಿ ಪಿಂಚಣಿ ಸೌಲಭ್ಯ ಸೇರಿ ಯಾವ ಸೌಲಭ್ಯಗಳು ಈಗ ದೊರೆಯುತ್ತಿಲ್ಲ. ಇಲಾಖೆಯ ಅಧಿಕಾರಿಗಳನ್ನು ಕೇಳಿದರೆ ಯಾವುದಕ್ಕೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಮಹಿಳೆಯರಿಗೆ ಹೆರಿಗೆ ಸೌಲಭ್ಯ, ಮದುವೆ ಸಹಾಯಧನ, ವೈದ್ಯಕೀಯ ಸಹಾಯಧನ, ತಾಯಿ ಮಗು ಸಹಾಯ ಹಸ್ತ ಸೇರಿ ಯಾವ ಸೌಲಭ್ಯಗಳು ಕಾರ್ಮಿಕರಿಗೆ ದೊರೆಯುತ್ತಿಲ್ಲ. ಅಧಿಕಾರಿಗಳು ಇಲ್ಲಸಲ್ಲದ ನೆಪಹೇಳಿ ನಿಜವಾದ ಕಾರ್ಮಿಕರ ಕಾರ್ಡ್ಗಳನ್ನು ರದ್ದುಪಡಿಸಿದ್ದಾರೆ. ಕಾರ್ಮಿಕರಲ್ಲದವರ ಕಾರ್ಡ್ಗಳು ಇಂದಿಗೂ ಜಾಲ್ತಿಯಲ್ಲಿವೆ. ಇದರಿಂದಾಗಿ ನಿಜವಾದ ಕಾರ್ಮಿಕರು ವಿವಿಧ ಸಮಸ್ಯೆ ಎದುರಿಸಬೇಕಿದೆ.

ಆದ್ದರಿಂದ ಸಂಬAಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರಮುಖರಾದ ನಾಗರಾಜ ಶಿವಮ್ಮನವರ, ನಾಗೇಂದ್ರಪ್ಪ ಅರ್ಕಾಚಾರಿ, ಚಂದ್ರಪ್ಪ ಬಣಕಾರ, ಭೀಮಪ್ಪ ಬೇಟಗೇರಿ, ಮೆಹಬೂಬ್ ಹಲಗೇರಿ, ನನ್ನೆಸಾಬ ನೂಕಾಪುರ, ಸಿಕಂದರ್ ಹಲಗೇರಿ, ಮುಬಾರಕ ಕಾಟೇನಹಳ್ಳಿ, ಮುಬಾರಕ್ ಖತೀಬ್, ಅಬ್ಬಸಾಬ್ ಕೋಡ, ರೋಷನ್, ಶಾರುಖ್ ಹಲಗೇರಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net