

ರಾಣೆಬೆನ್ನೂರು: ಬೆಳಗಾವಿ ಕೆಎಲ್ಇ ಸಂಸ್ಥೆ ಹಾಗೂ ವಿವಿಧ ವೈದ್ಯಕಿಯ ಸಂಸ್ಥೆಗಳ ಸಹಯೋಗದಲ್ಲಿ ಆ. 8ರಂದು ಬೆಳಗ್ಗೆ 10.30 ನಗರದ ಕೆಎಲ್ಇ ರಾಜರಾಜೇಶ್ವರಿ ಮಹಿಳಾ ವಿದ್ಯಾಲಯದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ ಆಯೋಜಿಸಲಾಗಿದೆ ಎಂದು ಕೆಎಲ್ಇ ಸಂಸ್ಥೆ ಆಡಳಿತಾಧಿಕಾರಿ ಡಾ. ಅಲ್ಲಮಪ್ರಭು ಕುಡಚಿ ತಿಳಿಸಿದರು.
ನಗರದ ರಾಜರಾಜೇಶ್ವರಿ ಕಾಲೇಜ್ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರ, ಕೆ.ಎಲ್.ಇ. ಆಸ್ಪತ್ರೆ ಹಾಗೂ ಇತರ ವೈದ್ಯಕಿಯ ಘಟಕಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಲಾಗಿದೆ.
ಶಿಬಿರದಲ್ಲಿ ಹೃದಯರೋಗ, ನರರೋಗ, ಕಿವಿ, ಮೂಗು, ಗಂಟಲು, ಕಣ್ಣಿನ, ಎಲುಬು ಮತ್ತು ಕೀಲು, ಮೂತ್ರರೋಗ, ಸ್ತ್ರೀರೋಗ, ಸಾಮಾನ್ಯ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಭಾಗವಹಿಸಿ ಉಚಿತ ತಪಾಸಣೆ ನಡೆಸಲಿದ್ದಾರೆ. ನಗರ ಸೇರಿ ತಾಲೂಕಿನ ಜನತೆ ಶಿಬಿರದ ಸದಪಯೋಗ ಪಡೆದುಕೊಳ್ಳಬೇಕು.
ಕೆಎಲ್ಇ ಆಡಳಿತಾಧಿಕಾರಿ ಡಾ. ಪ್ರಭಾಕರ ಕೋರೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಶಂಕ್ರಣ್ಣ ಮುನವಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಪ್ರಕಾಶ ಕೋಳಿವಾಡ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಅಧ್ಯಕ್ಷ ವಿ.ಪಿ. ಲಿಂಗನಗೌಡ್ರ, ರೋಟರಿ ಸಂಸ್ಥೆ ಅಧ್ಯಕ್ಷ ಡಾ. ಪ್ರವಿಣ ಖನ್ನೂರ, ಪ್ರಮುಖರಾದ ಬಿ.ಎಸ್. ಪಟ್ಟಣಶೆಟ್ಟಿ, ಜಿ.ಜಿ. ಹೊಟ್ಟಿಗೌಡ್ರ, ವೀರೇಶ ಮೋಟಗಿ, ಬಸವರಾಜ ಹುಲ್ಲತ್ತಿ, ಡಾ. ಬಸವರಾಜ ಕೇಲಗಾರ, ಉಮೇಶ ಹೊನ್ನಾಳಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.