

ಬ್ಯಾಡಗಿ: ಜಮೀನು ಮಾರಾಟದಲ್ಲಿ ಮೋಸ ಹಾಗೂ ಬಡ್ಡಿ ಸಾಲಗಾರರ ಕಾಟದಿಂದ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ವಿರುದ್ಧ ಇಲ್ಲಿಯ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ದ್ಯಾಮವ್ವನ ಗುಡಿ ಹತ್ತಿರದ ಸತೀಶ ರೇವಣೆಪ್ಪ ಮೋಟೆಬೆನ್ನೂರು (46) ಮೃತ ವ್ಯಕ್ತಿ. ಪ್ರಸನ ಪ್ರಕಾಶ ಶಿರವಾಡಕರ ಹಾಗೂ ಕಾಂತೇಶ ಸುಭಾಸ ಮಹಾರಾಜಪೇಟ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿರುವುದು.
ಪ್ರಕರಣದ ಕುರಿತು ಮೃತನ ಸಂಬಂಧಿಕರು ದೂರು ನೀಡಿದ್ದು, ಪ್ರಸನ ಎಂಬುವನು ಸತೀಶ ಬಳಿ 1 ಎಕರೆಗೆ 1 ಕೋಟಿ ರೂ.ನಂತೆ ಜಮೀನು ಖರೀದಿಸಿದ್ದಾನೆ. ಅದರಲ್ಲಿ 56 ಲಕ್ಷ ರೂ. ಮಾತ್ರ ಕೊಟ್ಟಿದ್ದು, ಬಾಕಿಯಿರುವ ಹಣ ನೀಡಿರಲಿಲ್ಲ. ಇದೇ ರೀತಿ ಹಂತ ಹಂತವಾಗಿ ಮತ್ತೇ 1.34 ಎಕರೆ ಜಮೀನನ್ನು ಬರೆಯಿಸಿಕೊಂಡು ಮೋಸ ಮಾಡಿದ್ದಾನೆ. ಕಾಂತೇಶ ಎಂಬುವನು 6 ಲಕ್ಷ ರೂ. ಬಡ್ಡಿ ಸಾಲ ನೀಡಿ ತಿಂಗಳಿಗೆ 80 ಸಾವಿರ ರೂ. ವಸೂಲಿ ಮಾಡಿದ್ದಾನೆ. ಒಂದು ದಿನ ತಡವಾಗಿ ಬಡ್ಡಿ ಹಣ ನೀಡಲು ಹೋದಾಗ 1 ಲಕ್ಷ ರೂ. ವಸೂಲಿ ಮಾಡಿ ಅವಾಚ್ಯ ಶಬ್ದದಿಂದ ಬೈದಿದ್ದಾನೆ. ಇದರಿಂದ ಬೇಸತ್ತ ಸತೀಶ ಮನೆಯ ದನದ ಕೊಟ್ಟಿಗೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.