ಎಲ್ಲ ದೇಶದವರಿಗಿಂತ ಭಾರತೀಯರು ಬುದ್ಧಿವಂತರು Indians smarter
ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮದ ಜಗದ್ಗುರು ಪಂಚಾಚಾರ್ಯ ವೇದ, ಆಗಮ ಪಾಠಶಾಲೆಯ ಆವರಣದಲ್ಲಿ ಆಯೋಜಿಸಿದ್ದ 3ನೇ ದಿನದ ಮಾನವ ಧರ್ಮ ಸಮಾವೇಶದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಸನ್ಮಾನಿಸಲಾಯಿತು.
ಬಂಕಾಪುರ: ಎಲ್ಲ ದೇಶಗಳ ಜನರಿಗಿಂತ ಭಾರತೀಯರು (Indians smarter) ಬುದ್ಧಿವಂತರಿದ್ದಾರೆ. ನಮ್ಮ ಮಕ್ಕಳಿಗೆ ಅವಕಾಶ ಕೊಟ್ಟರೆ ಜಗತ್ತನ್ನು ಆಳುತ್ತಾರೆ. ಇದು ಭಾರತದ ಯುಗ, 2047ಕ್ಕೆ ವಿಕಸಿತ ಭಾರತ ಮಾಡುವ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಗ್ಗಾಂವಿ ತಾಲೂಕಿನ ಬಿಸನಳ್ಳಿ ಗ್ರಾಮದ ಶ್ರೀ ಜಗದ್ಗುರು ಪಂಚಾಚಾರ್ಯ ವೇದ, ಆಗಮ, ಸಂಸ್ಕೃತ, ಸಂಗೀತ, ಯೋಗ ಮತ್ತು ಜ್ಯೋತಿಷ ಪಾಠಶಾಲೆಯ ಆವರಣದಲ್ಲಿ ಲೋಕಕಲ್ಯಾರ್ಥವಾಗಿ ಆಯೋಜಿಸಿದ್ದ 3ನೇ ದಿನದ ಧರ್ಮಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಕಾಶಿ ಜಗದ್ಗುರುಗಳು ಪಾಠಶಾಲೆ ಆರಂಭ ಮಾಡಿದಾಗಲೇ ಬಿಸನಳ್ಳಿ ಪುಣ್ಯಭೂಮಿಯಾಗಿದೆ. ನೂರಾರು ವಿದ್ಯಾರ್ಥಿಗಳು, ಆಗಮ, ವೇದ, ಸಂಸ್ಕೃತ, ಜ್ಯೋತಿಷದಲ್ಲಿ ಪರಿಣಿತರಾಗುತ್ತಿದ್ದಾರೆ. ಮುಂದಿನ ಜನಾಂಗಕ್ಕೆ ಸಂಸ್ಕೃತಿ, ಸಂಸ್ಕಾರ ಹೇಳಿಕೊಡುವ ವಟುಗಳನ್ನು ತಯಾರು ಮಾಡದೇ ಹೋದರೆ ನಮ್ಮ ದೇಶದ ಪರಿಸ್ಥಿತಿ ಏನಾಗುತ್ತದೆ ಯೋಚಿಸಿ. ಹಿಂದಿನವರು ಇದನ್ನು ಮಾಡಿಕೊಂಡು ಬಂದಿದ್ದಾರೆ. ಪರಮಪೂಜ್ಯರ ವಾಣಿ ಮುಖಾಂತರ ನಮ್ಮ ಬದುಕನ್ನು ಸಹಜವಾಗಿ ತಿಳಿದುಕೊಳ್ಳಲು ಸಾಧ್ಯವಾಯಿತು. ಇದು ನಿರಂತರ ನಡೆಯುತ್ತಿರುವ ಸಾಂಸ್ಕೃತಿಕ ಚಳವಳಿ, ಕಾಶಿ ಜಗದ್ಗುರುಗಳು ಮಾಡುತ್ತಿರುವುದು ಪುಣ್ಯದ ಕಾರ್ಯ ಎಂದರು.
ಆದಿ ಜಗದ್ಗುರು ರೇಣುಕಾಚಾರ್ಯರು ಮಾನವ ಧರ್ಮಕ್ಕೆ ಜಯವಾಗಲಿ ಎಂದು ಹೇಳಿದ್ದಾರೆ. ಕಾಮ, ಕ್ರೋಧ ಮದ, ಮತ್ಸರದ ಸಂಕೋಲೆಯಲ್ಲಿ ಸಿಲುಕಿರುವ ಮನುಷ್ಯ, ಅವುಗಳಿಂದ ಹೊರ ಬಂದು ಪ್ರೀತಿ, ಪ್ರೇಮ, ಧರ್ಮ, ಸತ್ಯ, ವಿಶ್ವಾಸ ಮೈಗೂಡಿಸಿಕೊಳ್ಳಬೇಕು ಎಂದರು.
ಕಾಶಿ ಪೀಠದ ಕಿರಿಯ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಅನ್ನದಾನ ಮಹಾದಾನ ವಾದರೂ ಅದು ಕ್ಷಣಿಕ ದಾನವಾಗಿದೆ. ವಿದ್ಯಾದಾನ ಮನುಷ್ಯನಿಗೆ ನೀಡುವ ಶಾಶ್ವತ ದಾನವಾಗಿದೆ. ಅದನ್ನು ಕಾಶಿ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು ದೇಶಾದ್ಯಂತ ಚಟುಗಳಿಗೆ ಆಶ್ರಯ, ಅನ್ನ, ವಿದ್ಯಾದಾನ ಮಾಡಿಕೊಂಡು ಬರುತ್ತಿದ್ದಾರೆ. ಹಸಿದ ಜಂಗಮನನ್ನು ತೃಪ್ತಿಪಡಿಸಿದರೆ ಶಿವನನ್ನು ಸಂತೃಪ್ತಿಪಡಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.