ಅಕ್ರಮ ಮರಳು ಅಡ್ಡೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಾಳಿ

ಲೋಕಾಯುಕ್ತ ಅಧಿಕಾರಿಗಳ ದಾಳಿ
ಲೋಕಾಯುಕ್ತ ಅಧಿಕಾರಿಗಳ ದಾಳಿ
Published on

ರಾಣೆಬೆನ್ನೂರು: ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ದಂಧೆ ನಡೆಸುತ್ತಿದ್ದವರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, 8 ಕಡೆಗಳಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ಮರಳು ಸಂಗ್ರಹವನ್ನು ಪತ್ತೆ ಮಾಡಿದ್ದಾರೆ.

ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ವಿವಿಧ ತಂಡಗಳಾಗಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಸುಮಾರು 17,779 ಮೆಟ್ರಿಕ್ ಟನ್ ಮರಳು ಪತ್ತೆ ಮಾಡಿದ್ದಾರೆ. ಅಲ್ಲದೆ 2 ಜೆಸಿಬಿ, 4 ತೆಪ್ಪಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದ ನಿಂಗಪ್ಪ ಹನುಮಂತಪ್ಪ ಹೊನ್ನತ್ತೆಪ್ಪನವರ, ಗಣೇಶ ಅಶೋಕ ಬಾಕಿರ್, ಪ್ರಜ್ವಲ್ ಚನ್ನಗೌಡ್ರ, ವಿನಾಯಕ ಬಾಕಿರ್, ಸುರೇಶ ಬಾಕಿರ್, ಶಿವು ರಾಮಣ್ಣನವರ, ಹುಚ್ಚಪ್ಪ ಹೊನ್ನತ್ತಿ, ವಿವೇಕ ಕಲ್ಲಮ್ಮನವರ, ಪ್ರಕಾಶ ರಾಮಣ್ಣನವರ, ಕರಬಸಪ್ಪ ಕಲ್ಲಮ್ಮನವರ, ಹರನಗಿರಿಯ ಇಾರ್ನ್ ಚಾಕ್ತಿ, ಕೋಟಿಹಾಳದ ವಿರುಪಾಕ್ಷಪ್ಪ ಕೋರೇರ ಸೇರಿದಂತೆ ಹಲವರ ವಿರುದ್ಧ ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನದಿ ಪಾತ್ರದ ಪರಿಸರಕ್ಕೆ ಹಾನಿ ಉಂಟುಮಾಡುವ ರೀತಿಯಲ್ಲಿ ಮರಳು ತೆಗೆಯಲಾಗುತ್ತಿದ್ದು, ಇದರಿಂದ ನದಿ ಹರಿವು, ಅಂತರ್ಜಲ ಮಟ್ಟ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಅಕ್ರಮ ಮರಳು ದಂಧೆ ತಡೆಯಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ದಾಳಿಯ ವೇಳೆ ಪತ್ತೆಯಾದ ಮರಳಿನ ಮಾಲೀಕತ್ವ, ಸಾಗಣೆ ಪರವಾನಗಿ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿ ಮರಳು ಸಂಗ್ರಹಿಸಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net