

ರಾಣೆಬೆನ್ನೂರು: ನಗರ ಸೇರಿ ತಾಲೂಕಿನಾದ್ಯಂತ ಅಕ್ರಮವಾಗಿ ಗೋವು ಸಾಗಾಟ ಮತ್ತು ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ತಾಲೂಕು ಟಕದ ವತಿಯಿಂದ ನಗರದ ಮಿನಿ ವಿಧಾನಸೌಧ ಎದುರು ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸಂಟನೆಯ ತಾಲೂಕು ಅಧ್ಯಕ್ಷ ವಿನಾಯಕ ಬಾಳನಗೌಡ್ರ ಮಾತನಾಡಿ, ಸರ್ಕಾರ ಜಾನುವಾರು ಹತ್ಯೆ ಕಾಯ್ದೆ ರೂಪಿಸಿದೆ. ಆದರೆ, ಸರ್ಕಾರ ರೂಪಿಸಿದ ಕಾಯ್ದೆ ಉಲ್ಲಂಘಿಸಿ ನಗರ ಸೇರಿ ತಾಲೂಕಿನಾದ್ಯಂತ ವಿವಿಧೆಡೆ ಗೋ ಹತ್ಯೆ ಮಾಡಲಾಗುತ್ತಿದೆ. ಅಲ್ಲದೆ ನಗರದಿಂದ ಬೇರೆ ಬೇರೆಡೆ ಗೋಮಾಂಸ ಸಾಗಾಟ ಮಾಡಲಾಗುತ್ತಿದೆ.
ಆದ್ದರಿಂದ ಪೊಲೀಸ್ ಇಲಾಖೆ ನಗರದಲ್ಲಿ ಅಕ್ರಮ ಗೋ ಸಾಗಾಟ ತಡೆಗಟ್ಟುವ ನಿಟ್ಟಿನಲ್ಲಿ ಚೆಕ್ಪೋಸ್ಟ್ ಸ್ಥಾಪಿಸಬೇಕು. ವೈದ್ಯರ ಪರವಾನಗಿ ಇಲ್ಲದೆ ಗೋ ಸಾಗಾಟ ಮತ್ತು ಹತ್ಯೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಚೆಕ್ಪೋಸ್ಟ್ ಸ್ಥಾಪಿಸುವವರೆಗೂ ನಗರದ ಎಪಿಎಂಸಿ ಜಾನುವಾರು ಮಾರುಕಟ್ಟೆ ಬಂದ್ ಮಾಡಿಸಬೇಕು.
ಪೊಲೀಸರು ಹಾಗೂ ತಾಲೂಕು ಆಡಳಿತ ಕೂಡಲೇ ಮನವಿಗೆ ಸ್ಪಂದಿಸಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹಿಂದೂ ಕಾರ್ಯಕರ್ತರು ಗೋ ಹತ್ಯೆ ಮಾಡುವವರನ್ನು ಹಾಗೂ ಅಕ್ರಮವಾಗಿ ಗೋಸಾಗಾಟ ಮಾಡುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತೇವೆ. ಆಗ ಪೊಲೀಸರು ಹಿಂದೂ ಕಾರ್ಯಕರ್ತರ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸಬಾರದು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹಿಂದೂ ಕಾರ್ಯಕರ್ತರಾದ ಮಂಜುನಾಥ ಚಲವಾದಿ, ಚನ್ನಬಸಪ್ಪ ಓಂಕಾರಣ್ಣನವರ, ಶರತಕುಮಾರ ನೂಲಗೇರಿ, ಬೀರಪ್ಪ ಗುದಿಗೇರ, ನಾಗರಾಜ ಕೊರಟರ, ವಿ.ಎಸ್. ಮಾಯಮ್ಮನವರ, ಶರತ ಪೂಜಾರ, ಜಯರಾಮ ಕುಂದಾಪುರ, ಬೀರಪ್ಪ ಗೌಡ್ರ, ದೀನೇಶ ಪಾಟೀಲ ಮತ್ತಿತರರು ಪಾಲ್ಗೊಂಡಿದ್ದರು.