

ರಾಣೆಬೆನ್ನೂರ: ಮರ್ಯಾದಾ ಹತ್ಯೆ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ ಇಚ್ಛಾಶಕ್ತಿ ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ, ಅವರ ಕುಟುಂಬದ ಮೇಲೆ ನಡೆಯುವ ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು ಘೋರ ಅಪರಾಧ ಎಂದು ಪರಿಗಣಿಸಿ, ಮರ್ಯಾದಾ ಹತ್ಯೆ ವಿರುದ್ಧ ಕಠಿಣ ಕಾಯ್ದೆ ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ನಗರದ ಮಿನಿ ವಿಧಾನಸೌಧ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಮಾತನಾಡಿ, ಹುಬ್ಬಳ್ಳಿಯ ಇನಾಂವೀರಾಪುರದ ಗಭಿರ್ಣಿ ಯುವತಿ ಮಾನ್ಯಾ ಪಾಟೀಲ ಮರ್ಯಾದೆಗೇಡು ಹತ್ಯೆ ಖಂಡಿನೀಯ. ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಅನ್ಯ ಜಾತಿ ಯುವಕ ವಿವೇಕಾನಂದ ದೊಡ್ಡಮನಿಯನ್ನು ಮದುವೆಯಾಗಿದ್ದಕ್ಕೆ ಏಳು ತಿಂಗಳು ಗಭಿರ್ಣಿಯಾಗಿದ್ದ ಮಾನ್ಯಾ ಪಾಟೀಲ ಮೇಲೆ ಸ್ವತಃ ತಂದೆ ಹಾಗೂ ಕುಟುಂಬಸ್ಥರು ನಡೆಸಿದ್ದ ಮರ್ಯಾದೆಗೇಡು ಭೀಕರ ಹತ್ಯೆಯು ನಾಗರೀಕ ಸಮಾಜಕ್ಕೆ ತೀವ್ರ ಆಘಾತವನ್ನುಂಟು ಮಾಡಿದೆ.
ಅವಮರ್ಯಾದಾ ಹತ್ಯೆಗಳ ವಿರುದ್ಧ ಜನಸಮುದಾಯಗಳನ್ನ ಸಂವೇಧನಾಶೀಲಗೊಳಿಸಲು ಸರ್ಕಾರ ಮುಂದಾಗಬೇಕು. ಅವಮರ್ಯಾದಾ ಹತ್ಯೆಗಳನ್ನ ಪ್ರೊತ್ಸಾಹಿಸುವ, ಸಹಕರಿಸುವ, ಸಹಾಯ ಮಾಡುವವರ ವಿರುದ್ಧವು ಕ್ರಮ ಕೈಗೊಳ್ಳಬೇಕು. ಯಾವ ಜಿಲ್ಲೆಯಲ್ಲಿ ಹೆಚ್ಚು ಅವಮರ್ಯಾದಾ ಹತ್ಯೆಗಳು ಮತ್ತೆ ಮತ್ತೆ ಮರಕಳಿಸುತ್ತಿದೆಯೊ ಆ ಜಿಲ್ಲೆಯ ಜಿಲ್ಲಾಡಳಿತ ವಿಶೇಷ ಮುತುವಜಿರ್ ವಹಿಸಿ ಜನಜಾಗೃತಿ ಕಾರ್ಯಕ್ರಮಗಳನ್ನ ಸಂಘಟಿಸಬೇಕು ಎಂದು ಆಗ್ರಹಿಸಿದರು. ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರಮುಖರಾದ ಮೈಲಪ್ಪ ದಾಸಪ್ಪನವರ, ರಮೇಶ ಪೂಜಾರ, ಮಲ್ಲೇಶಪ್ಪ ಮೆಣಸಿನಹಾಳ, ಚೌಡಪ್ಪ ಪೂಜಾರ, ಕರಿಬಸಪ್ಪ ಸುಳ್ಳಣ್ಣನವರ, ಸಂತೋಷ ನಡುವಿನಕೇರಿ, ಸಂತೋಷ ಹೊನ್ನಕ್ಕಳವರ, ಮಾರುತಿ ಮಾದರ ಮತ್ತಿತರರು ಪಾಲ್ಗೊಂಡಿದ್ದರು.