ರಾಜ್ಯದ ಹಿತ ಕಾಯಲು ಬದ್ಧ: Honor

ಹಾನಗಲ್ಲಿನ ಗ್ರಾಮದೇವಿ ದೇವಸ್ಥಾನದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ ಮಾನೆ, ಮಂಜುನಾಥ ನಾಗಜ್ಜನವರ, ರಾಜು ಗೌಳಿ, ಬಾಳಾರಾಮ ಗುರ್ಲಹೊಸೂರ, ಯಲ್ಲಪ್ಪ ಶೇರಖಾನಿ ಇತರರಿದ್ದರು.
ಹಾನಗಲ್ಲಿನ ಗ್ರಾಮದೇವಿ ದೇವಸ್ಥಾನದಲ್ಲಿ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಶ್ರೀನಿವಾಸ ಮಾನೆ, ಮಂಜುನಾಥ ನಾಗಜ್ಜನವರ, ರಾಜು ಗೌಳಿ, ಬಾಳಾರಾಮ ಗುರ್ಲಹೊಸೂರ, ಯಲ್ಲಪ್ಪ ಶೇರಖಾನಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಸವಣೂರು
ಸಭಾಪತಿ ಪೀಠಕ್ಕೆ ಯಾವುದೇ ಜಾತಿ, ಜನಾಂಗ ಹಾಗೂ ಧರ್ಮದ ಹಂಗಿಲ್ಲ. ಸಂವಿಧಾನದ ನಿಯಮಾವಳಿಗಳಿಗೆ ಬದ್ಧರಾಗಿ, ನಿಷ್ಪಕ್ಷಪಾತವಾಗಿ ಸದನ ನಡೆಸಿ ರಾಜ್ಯದ ಹಿತ ಕಾಯಲು ಶ್ರಮಿಸುತ್ತೇನೆ ಎಂದು ನೂತನ ಸಭಾಪತಿ ಸಲೀಂ ಅಹ್ಮದ್ ಹೇಳಿದರು.
ಪಟ್ಟಣದ ದೊಡ್ಡಹುಣಸೇ ಕಲ್ಮಠದಲ್ಲಿ ಸೋಮವಾರ ನಾಡಿನ ವಿವಿಧ ಮಠಾಧೀಶರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಸದನದಲ್ಲಿ ಜನಹಿತ ಚರ್ಚೆಗೆ ಆದ್ಯತೆ ನೀಡುತ್ತೇನೆ. ಕಳೆದ 45 ವರ್ಷಗಳಿಂದ ವಿದ್ಯಾರ್ಥಿ ನಾಯಕತ್ವದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದೇನೆ. ಸಭಾಪತಿ ಪೀಠದಲ್ಲಿದ್ದಾಗ ಆಡಳಿತ ಮತ್ತು ವಿರೋಧ ಪಕ್ಷಗಳೆರಡನ್ನೂ ಸಮಾನವಾಗಿ ಕಂಡು ಸದನವನ್ನು ನಡೆಸುವುದು ನನ್ನ ಮುಖ್ಯ ಕರ್ತವ್ಯವಾಗಿದೆ ಎಂದರು.
ರಾಜ್ಯ ಎದುರಿಸುತ್ತಿರುವ ಭೀಕರ ಬರಗಾಲ, ಕುಡಿಯುವ ನೀರಿನ ಅಭಾವ, ರೈತರು ಹಾಗೂ ಕಾರ್ಮಿಕರ ಸಮಸ್ಯೆಗಳ ಕುರಿತು ಸದನದಲ್ಲಿ ಸುದೀರ್ಘ ಚರ್ಚೆಯಾಗಬೇಕಿದೆ. ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಕಲಾಪಗಳು ಸುಸೂತ್ರವಾಗಿ ನಡೆಯಲು ಸಹಕರಿಸುವಂತೆ ವಿರೋಧ ಪಕ್ಷದ ನಾಯಕರಿಗೂ ಮನವಿ ಮಾಡಿದ್ದರೂ ಕಳೆದ ಅಧಿವೇಶನದಲ್ಲಿ ಗದ್ದಲದಿಂದಾಗಿ ಜನರ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿಲ್ಲ. ಚರ್ಚೆ ಮಾಡದೆ ವಿಧೇಯಕ ಅಂಗೀಕಾರ ಆಗಿರೋದು ನೋವಿನ ಸಂಗತಿ ಎಂದರು.
ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಫಕ್ಕೀರದಿಂಗಾಲೇಶ್ವರ ಸ್ವಾಮೀಜಿ, ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ, ಹೂವಿನಶಿಗ್ಲಿ ವಿರಕ್ತಮಠದ ಚನ್ನವೀರ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ತಿಳುವಳ್ಳಿಯ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹೆಸ್ಕಾಂ ಅಧ್ಯಕ್ಷ ಅಜೀಂಪೀರ್ ಖಾದ್ರಿ, ಶಾಸಕ ಯಾಸೀರಖಾನ್ ಪಠಾಣ, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಸಂತಾ ಬಾಗೂರು ಇತರರಿದ್ದರು.

ಅದ್ದೂರಿ ಸ್ವಾಗತ

ಸವಣೂರು ವಿಧಾನ ಪರಿಷತ್‌ನ ಸಭಾಪತಿಯಾಗಿ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ಸಲೀಂ ಅಹ್ಮದ್ ಅವರನ್ನು ಸವಣೂರಿನಲ್ಲಿ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಜೈಕಾರ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಳಿಕ ಸವಣೂರಿನ ದೊಡ್ಡಹುಣಸೇ ಮಠಕ್ಕೆ ಭೇಟಿ ನೀಡಿದ ಅವರನ್ನು ಮಠದ ಭಕ್ತರು ಪುಷ್ಪವೃಷ್ಟಿಗೈದು ಸ್ವಾಗತಿಸಿದರು.

ದರ್ಗಾ, ಗ್ರಾಮದೇವಿ ದೇವಸ್ಥಾನಕ್ಕೆ ಭೇಟಿ

ಹಾನಗಲ್ಲ: ಪೌರಾಣಿಕ ಪ್ರಸಿದ್ಧ ಹಾನಗಲ್ಲಿನ ಕಾಶ್ಮೀರಿ ದರ್ಗಾ ಹಾಗೂ ನೂತನ ಗ್ರಾಮದೇವಿ ಶಿಲಾ ಮಂದಿರಕ್ಕೆ ವಿಧಾನ ಪರಿಷತ್ ಸಭಾಪತಿ ಸಲೀಂ ಅಹ್ಮದ್ ಭೇಟಿ ನೀಡಿ ದರ್ಶನಾಶಿರ್ವಾದ ಪಡೆದರು.
ಸೋಮವಾರ ಪಟ್ಟಣದ ಕಾಶ್ಮೀರಿ ದರ್ಗಾದ ಪೀರಸೈಯ್ಯದ್ ಮಕ್ಬೂಲ್‌ಅಹ್ಮದ್‌ಷಾ ಖಾದ್ರಿ ಕಾಶ್ಮೀರಿ ಗುರುಗಳ ಸಮಾಧಿಗೆ ಚಾದರ್ ಹೊದಿಸಿ ಭಕ್ತಿ ಸಮರ್ಪಿಸಿದರು. ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ ಮಾನೆ, ತಹಸೀಲ್ದಾರ್ ವಿಠ್ಠಲ ಚೌಗಲಾ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೀರಣ್ಣ ಬೈಲವಾಳ, ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಮಾಲಾನಾ ಶಫಿವುಲ್ಲಾ, ಮಹಮ್ಮದ್ ಮತಿನ್ ಶಿರಬಡಗಿ, ಶಕೀಲ್‌ಅಹಮದ್ ಬಾಳೂರ, ಇರ್ಫಾನ್ ಇನಾಂದಾರ, ಯಾಸಿರ್ ಅರಾಫತ್ ಮಕಾನದಾರ, ಎಂ.ಎಂ.ಮುಲ್ಲಾ, ಖಾಲಿದ್ ಅಹ್ಮ್ಮದ್ ಶೇಷಗಿರಿ ಇದ್ದರು.
ಗ್ರಾಮದೇವಿ ದರ್ಶನ :ನಂತರ ನೂತನವಾಗಿ ನಿರ್ಮಿಸಲಾದ ಗ್ರಾಮದೇವಿಯ ಶಿಲಾ ಮಂದಿರಕ್ಕೆ ಭೇಟಿ ನೀಡಿದ ಅವರು ದೇವಿಯ ದರ್ಶನಾಶಿರ್ವಾದ ಪಡೆದರು. ದೇವಸ್ಥಾನ ಸಮಿತಿಯಿಂದ ಸಲೀಂ ಅಹ್ಮದ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮದೇವಿ ದೇವಸ್ಥಾನದ ಅಭಿವೃದ್ಧಿಗೆ 5 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಳಿಸುವುದಾಗಿ ಸಲೀಂ ಅಹ್ಮದ್ ಘೋಷಿಸಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಪದಾಧಿಕಾರಿಗಳಾದ ರಾಜು ಗೌಳಿ, ಬಾಳಾರಾಮ ಗುರ್ಲಹೊಸೂರ, ಯಲ್ಲಪ್ಪ ಶೇರಖಾನಿ, ನಾಗೇಂದ್ರ ಬಂಕಾಪೂರ, ಆದರ್ಶ ಶೆಟ್ಟಿ, ವಿರುಪಾಕ್ಷಪ್ಪ ಕಡಬಗೇರಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net