

ಶಿಗ್ಗಾಂವ: ಕುಟುಂಬದವರಿಗೆ ಫೋನ್ ಮಾಡಿದ ವಿಷ ಕುಡಿಯುವುದಾಗಿ ಹೇಳಿದ್ದ ಯುವಕನೊಬ್ಬ ವಿಷ ಸೇವಿಸಿ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದ ಕಣವಿ ಬಳಿ ನಡೆದಿದೆ.
ತಾಲೂಕಿನ ಮಡ್ಲಿ ಗ್ರಾಮದ ಶ್ರೀಕಾಂತ ಮಾಲತೇಶ ಗುಳೇದ (೨೪) ಮೃತ ಯುವಕ.
ಈತ ತನ್ನ ಕುಟುಂಬದವರಿಗೆ ಫೋನ್ ಮಾಡಿ ತಾನು ವಿಷ ಕುಡಿಯುವುದಾಗಿ ತಿಳಿಸಿದ್ದ. ಕುಟುಂಬದವರು ಅಂಥ ಕೆಲಸ ಮಾಡಬೇಡ ಎನ್ನುತ್ತ ಆತ ಇದ್ದ ಸ್ಥಳಕ್ಕೆ ಬಂದಿದ್ದಾರೆ. ಅಷ್ಟರಲ್ಲಿ ಶ್ರೀಕಾಂತ ವಿಷ ಸೇವನೆ ಮಾಡಿ ಅಸ್ವಸ್ಥಗೊಂಡಿದ್ದ. ಕೂಡಲೇ ಆತನನ್ನು ತಾಲೂಕು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆತ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.
ಆತ ವಿಷ ಸೇವಿಸುವ ಸಮಯದಲ್ಲಿ ಆತನೊಂದಿಗೆ ಕಿರಣ ಶಾಂತಪ್ಪ ಹರಕುಣಿ ಎಂಬ ಯುವಕ ಇದ್ದ. ಪೊಲೀಸರು ಆತನನ್ನು ಕರೆತಂದು ವಿಚಾರಣೆ ನಡೆಸಿದರೆ, ಶ್ರೀಕಾಂತ ಏತಕ್ಕಾಗಿ ವಿಷ ಸೇವಿಸಿದ್ದಾನೆ ಎಂಬುದು ತಿಳಿಯಲಿದೆ ಎಂದು ಮೃತನ ಕುಟುಂಬಸ್ಥರು ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.