ಕಲಾವಿದರಾದ ಮಂಜು ಕಾಸರಗೋಡ, ಅಜೇಯಸಿಂಹ, ನಯನಸಿ, ರಾಧಾ ರಾಮಚಂದ್ರ ಹಾಗೂ ಮಾಧವ ಜೋಗಿ ಅವರುಗಳ ಮಾಂತ್ರಿಕ ಅಭಿನಯವೇ ನಾಟಕದ ಶಕ್ತಿಯಾಗಿತ್ತು. ರಾಮ, ಕೃಷ್ಣ ಹಾಗೂ ಶಿವ ಭಾರತೀಯ ಮನಸುಗಳಲ್ಲಿ ಹಾಸು ಹೊಕ್ಕಾದ ಹೆಸರುಗಳು. ಧರ್ಮ ಬುನಾದಿ ನಂಬುಗೆಯ ತಳಹದಿಯ ಮೇಲೆ ಸ್ಥಾಪಿತವಾಗಿರುವ ಶ್ರದ್ಧಾ ಪಾತ್ರಗಳು. ಇಂತಹ ಪುರಾಣ ಚರಿತ್ರೆಯನ್ನು ಪ್ರಸಿದ್ಧ ಚಿಂತಕ ಡಾ.ರಾಮಮನೋಹರ ಲೋಹಿಯಾ ಹೊಸಗಣ್ಣುಗಳಿಂದ ಬರೆದ ಇತಿಹಾಸ ಪ್ರಸಿದ್ಧ ಲೇಖನ ರಾಮ-ಕೃಷ್ಣ-ಶಿವ’ (ಕನ್ನಡಕ್ಕೆ ಕೆ.ವಿ. ಸುಬ್ಬಣ್ಣ) ಆಧಾರಿತ ನಾಟಕವಿದು. ರಾಮ ಆದರ್ಶ ಪುರುಷ, ತ್ಯಾಗಿ, ಕಾಲಾತೀತ ವ್ಯಕ್ತಿತ್ವದವ. ಕೃಷ್ಣ ಚತುರ, ಸಾಮಾನ್ಯ ಸರ್ವಶಕ್ತ. ಇನ್ನು ಶಿವ ನಿಮೋಹಿ, ಅತಿ ವಿರಳ, ಸಾಮಾನ್ಯರಲ್ಲಿ ಸಾಮಾನ್ಯ. ಇಂತಹ ವಿಶಿಷ್ಟ ಪರಿಪೂರ್ಣತೆ ವ್ಯಕ್ತಿತ್ವಗಳ ಅನಾವರಣವೇ ರಾಮ-ಕೃಷ್ಣ-ಶಿವ. ನಾಟಕದಲ್ಲಿನ ಸಂದೇಶದ ಜತೆಗೆ ಕಲಾತ್ಮಕತೆಯ ಸ್ಪರ್ಶವಿತ್ತು. ಎಲ್ಲರ್ರೂ ಒಪ್ಪಬಹುದಾದ ತಾತ್ವಿಕ ನೆಲೆ ಪ್ರೇಕ್ಷಕರ ಗಮನ ಸೆಳೆಯಿತು.