

ರಾಣೆಬೆನ್ನೂರ: ತಾಲೂಕಿನ ಹಿರೇಬಿದರಿ ಗ್ರಾಮದ ಹೆಸರನ್ನು "ಕನ್ನಡದೂರು' ಎಂದು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ನಾವು ದ್ರಾವಿಡ ಕನ್ನಡಗರ ಸಂದ ವತಿಯಿಂದ ಗುರುವಾರ ಹಿರೇಬಿದರಿ ಗ್ರಾಪಂ ಪಿಡಿಒ ಅಶ್ವಥನಾರಾಯಣ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಹಾವೇರಿ ಜಿಲ್ಲೆಯ ಗಡಿ ಪ್ರದೇಶವಾದ ಹಿರೇಬಿದರಿ ಗ್ರಾಮವು ಈ ಹಿಂದೆ ಕಿತ್ತೂರು ಕರ್ನಾಟಕ ಸೇರಿ ರಾಜ್ಯದ ಇತರ ವಿಭಾಗಗಳಾದ ಸಮಯದಲ್ಲಿ ಹಳೆ ಮೈಸೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸೇರುವ ಕೊಂಡಿಯಾಗಿತ್ತು. ಈ ಸಂಗಮದ ಬಿಂದುವು ತುಂಗಭದ್ರ ನದಿ ತೀರವಾಗಿತ್ತು.
ಈ ಭಾಗದಿಂದ ಉತ್ತರಕ್ಕೆ ಸೇವಣರು ಮತ್ತು ದಕ್ಷಿಣಕ್ಕೆ ಹೊಯ್ಸಳರು 12ನೇ ಶತಮಾನದಲ್ಲಿ ರಾಜಪ್ರಭುತ್ವದ ಕಾರಣಕ್ಕೆ ಹಂಚಿಕೊಂಡ ನಂತರ 1956ರ ನವೆಂಬರ್ 1ರಂದು ಸರಿಸುಮಾರು 750 ವರ್ಷಗಳ ನಂತರ ಪ್ರಜಾಪ್ರಭುತ್ವದ ದಾರಿಯಲ್ಲಿ ಒಂದಾಗುವವರೆಗೂ ಕನ್ನಡಿಗರು ವಿವಿಧ ಆಡಳಿತಕ್ಕೆ ಒಳಪಟ್ಟು ಹರಿದು ಹಂಚಿ ಹೋಗಿದ್ದರು.
ವರ್ತಮಾನದಲ್ಲಿ ಭವಿಷ್ಯದಲ್ಲಿ ಪ್ರತಿಯೊಬ್ಬ ಕನ್ನಡಿಗರು ತಿಳಿದುಕೊಳ್ಳಬೇಕಾದ ಇತಿಹಾಸ ಮತ್ತು ವೀಕ್ಷಿಸ ಬೇಕಾಗಿರುವುದರಿಂದ ಈ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಬೇಕು ಎಂದು ಪ್ರವಾಸೋದ್ಯಮ ಇಲಾಖೆಗೆ ಒತ್ತಾಯಿಸಲು ಅನುಕೂಲವಾಗುತ್ತದೆ. ಆದ್ದರಿಂದ ಈ ಸಂಗಮದ ಬಿಂದುವಿನ ಸುತ್ತ ಮುತ್ತಲ ಪ್ರದೇಶವನ್ನು 'ಕನ್ನಡದೂರು' ಎಂದು ಹೆಸರಿಸಿ ಹಿರೇಬಿದರಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಠರಾವು ಪಾಸು ಮಾಡಲು ಸೂಚಿಸಬೇಕು ಎಂದು ಒತ್ತಾಯಿಸಿದರು.
ಸಂದ ರೂವಾರಿ ಶ್ರೀಕಾಂತ, ಗ್ರಾಮಸ್ಥರಾದ ಗಂಗಮ್ಮ ಮಲ್ಲಾಪುರ, ಗೀತಾ, ರೂಪಾ, ವೇದಾವತಿ, ಶಿವಪ್ಪ, ಗೀತಾ ಕೆಂಚನಗೌಡ್ರ, ಕೋಟ್ರೇಶ ಮಠದ, ಪುಷ್ಪಾ ಹೊಳೆಬಸಪ್ಪ ಮತ್ತಿತರರು ಇದ್ದರು.