ಹಿಂದೂಗಳ ಮೇಲಿನ ದಾಳಿ ಖಂಡಿಸಿ ಪ್ರತಿಭಟನೆ

ಮನವಿ ಸಲ್ಲಿಕೆ
ಮನವಿ ಸಲ್ಲಿಕೆ
Published on

ರಾಣೆಬೆನ್ನೂರ: ರಾಜ್ಯದ ವಿವಿಧ ಭಾಗಗಳಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಖಂಡಿಸಿ ತಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ತಾಲೂಕು ಟಕದ ವತಿಯಿಂದ ಸೋಮವಾರ ನಗರದ ಮಿನಿ ವಿಧಾನಸೌಧ ಎದುರು ಉಪ ತಹಸೀಲ್ದಾರ್ ಶ್ಯಾಮ ಕೊರವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಸಂಟನೆಯ ಮುಖಂಡ ಕೃಷ್ಣಾಸಾ ಪವಾರ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹಿಂದೂ ಸಮುದಾಯದ ಮೆರವಣಿಗೆಗಳಲ್ಲಿ ಮತ್ತು ಮನೆಯ ಮೇಲೆ, ವ್ಯಕ್ತಿಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು ಇದರಿಂದ ರಾಜ್ಯದ ಕಾನೂನು ಸುವ್ಯವಸ್ಥೆ ವಿಫಲವಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜ ಜಯಂತಿ ಮೆರವಣಿಗೆ ಮೇಲೆ ನಡೆದ ಕಲ್ಲು ತೂರಾಟ, ಚಿಕ್ಕಮಗಳೂರಿನಲ್ಲಿ ಹಿಂದೂಗಳ ಮನೆ ಮೇಲೆ ನಿರಂತರ ಕಲ್ಲು ತೂರಾಟ, ಶಿವಮೊಗ್ಗದಲ್ಲಿ ಬಾಲಕನನ್ನು ಅನ್ಯಮತಿಯ ಯುವಕರು ಹತ್ಯೆ ಮಾಡಿರುವುದು ಖಂಡನೀಯ. ಈ ಎಲ್ಲ ಘಟನೆಗಳು ನೋಡಿದರೆ ದಿನೇ ದಿನೇ ಹಿಂದೂಗಳ ಸ್ಥಿತಿ ಗಂಭೀರವಾಗಿದೆ ಮತ್ತು ಹಿಂದೂಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಈ ಪ್ರಕರಣಗಳನ್ನು ಎನ್ಐಎ ಮೂಲಕ ತನಿಖೆ ಮಾಡಿಸಬೇಕು. ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಹಾಕಬೇಕು. ಹಿಂದೂಗಳ ಮೆರವಣಿಗೆಗಳು ಮತ್ತು ಮನೆಗಳಿಗೆ ಸಮರ್ಪಕ ಪೊಲೀಸ್ ಭದ್ರತೆ ಒದಗಿಸಬೇಕು. ರಾಜ್ಯದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ಎಲ್ಲ ನಾಗರಿಕರ ಸುರಕ್ಷತೆ ಕಾಪಾಡುವುದು ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ. ಆದ್ದರಿಂದ ಸರ್ಕಾರ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಶಿವಕುಮಾರ ಹಿರೇಮಠ, ಮಲ್ಲಿಕಾರ್ಜುನ ತೆಗ್ಗಿನ, ಮರಳುಸಿದ್ದಯ್ಯ ಹಿರೇಮಠ, ರಘು ಗೊಂದಕರ, ಪರಮಯ್ಯ ಮಠದ, ಮಂಜಪ್ಪ ಬಸನಗೌಡ, ಸೋಮರೆಡ್ಡಿ ಹಾದಿಮನಿ, ಬಸಣ್ಣ ದೊಡ್ಡಕೊಪ್ಪದ, ಕುಮಾರಸ್ವಾಮಿ, ವೆಂಕಟರಮಣ ನಾಯಕ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net