

ರಾಣೆಬೆನ್ನೂರ: ಹಿಂದೂಗಳು ನಾವೆಲ್ಲ ಒಂದು ಎನ್ನುವ ಸೂತ್ರ ಇಟ್ಟುಕೊಂಡು ಕೆಲಸ ಮಾಡಬೇಕು. ಅಡ್ಡ ನಾಮ, ಉದ್ದ ನಾಮ, ವಿಭೂತಿ ಹೆಚ್ಚಿದರೆ ಒಂದು ಜಾತಿ, ಕುಂಕಮ ಇಟ್ಟರೆ ಮತ್ತೊಂದು ಜಾತಿ ಎಂಬುದನ್ನು ಬಿಡಬೇಕು. ಹಿಂದೂಗಳನ್ನು ತುಂಡು ಮಾಡುವವರಿಗೆ ಯಾವ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು. ಅಂದಾಗ ಭಾರತ ಸದೃಢ ಹಿಂದೂ ರಾಷ್ಟ್ರವಾಗಲು ಸಾಧ್ಯ ಎಂದು ಆರ್ಎಸ್ಎಸ್ ವಕ್ತಾರ ಸುಧಾಕರ ಶೆಟ್ಟಿ ಹೇಳಿದರು.
ಹಿಂದೂ ಸಮ್ಮೇಳನ ಸಮಿತಿ (ದಣ) ವತಿಯಿಂದ ನಗರದ ಹವಾಲ್ದಾರ್ ಹೊಂಡದ ಎದುರಿನ ವಾಲಿಯವರ ಜಾಗದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಬೃಹತ್ ಹಿಂದೂ ಸಮ್ಮೇಳನದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ನಮ್ಮಲ್ಲಿ ಜಾತಿ, ಜಾತಿಗಳ ನಡುವೆ ಹೊಡೆದಾಟ ಹಚ್ಚಿ ಹಿಂದೂಗಳನ್ನು ತುಂಡು ಮಾಡುವ ದುಷ್ಟ ಶಕ್ತಿಗಳು ಕೆಲಸ ಮಾಡುತ್ತಿವೆ. ಇದನ್ನು ನಾವು ಅರ್ಥೈಯಿಸಿಕೊಂಡು ಹಿಂದೂಗಳೆಲ್ಲ ಒಂದು ಎಂಬ ಭಾವನೆಯೊಂದಿಗೆ ಮುನ್ನಡೆಯಬೇಕು. ನಮ್ಮ ಮಕ್ಕಳನ್ನು ರಾಷ್ಟ್ರ ಭಕ್ತಿಯ ಕೇಂದ್ರದಲ್ಲಿ ಬೆಳೆಸುವ ಸಂಕಲ್ಪ ಮಾಡೋಣ. ಮುಂದಿನ ಪೀಳಿಗೆ ಗಟ್ಟಿಯಾಗಿ ಬದುಕಬೇಕು ಎಂದರೆ ಜಾತಿಗಳನ್ನು ಬಿಟ್ಟು ಒಂದಾಗಿ ಬಾಳಬೇಕು. ಜಾತಿ ಮನೆಯೊಳಗೆ ಮತ್ತು ಮದುವೆಯೊಳಗೆ ಮಾತ್ರ ಇಟ್ಟುಕೊಳ್ಳಬೇಕು. ಮನೆಯಿಂದ ಹೊರ ಬಂದ ಮೇಲೆ ನಾವೆಲ್ಲ ಹಿಂದೂಗಳು ಎಂಬ ಸಂಕಲ್ಪದೊಂದಿಗೆ ಬರಬೇಕು ಎಂದರು.
ಸಮಿತಿಯ ಅಧ್ಯಕ್ಷ ಮಂಜುನಾಥಸ್ವಾಮಿ ಮಣೇಗಾರ ಅಧ್ಯಕ್ಷತೆ ವಹಿಸಿದ್ದರು.
ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು.