

ರಾಣೆಬೆನ್ನೂರು: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಹೆಸ್ಕಾಂ)ಅನ್ನು ಖಾಸಗೀಕರಣ ಮಾಡುವ ಸರ್ಕಾರದ ನಿರ್ಧಾರ ಖಂಡಿಸಿ ಹೆಸ್ಕಾಂ ತಾಲೂಕು ಟಕದ ನೌಕರರು ಮಂಗಳವಾರ ನಗರದ ವಿಭಾಗೀಯ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 11 ಗಂಟೆಗೆ ಕಚೇರಿ ಎದುರು ಜಮಾಯಿಸಿದ ನೂರಾರು ಖಾಯಂ, ಗುತ್ತಿಗೆ ನೌಕರರು ಕೈಯಲ್ಲಿ ಸರ್ಕಾರದ ವಿರುದ್ಧದ ಆಕ್ರೋಶ ಬರಹ ಬರೆದ ಬಾವುಟ ಹಿಡಿದು "ಖಾಸಗೀಕರಣ ನಿಲ್ಲಿಸಿ", "ನೌಕರರ ಬದುಕು ಬೀದಿಗೆ ಬೀಡಬೇಡಿ' ಎಂದು ಘೋಷಣೆ ಕೂಗಿದರು.
ವಿದ್ಯುತ್ ಸೇವೆ ಲಾಭದ ವಸ್ತುವಲ್ಲ. ಖಾಸಗಿಯವರ ಕೈಗೆ ಹೋದರೆ ಗ್ರಾಮೀಣ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಹೆಚ್ಚಾಗುತ್ತದೆ. ರೈತರಿಗೆ, ಬಡವರಿಗೆ ವಿದ್ಯುತ್ ದರ ಏರಿಕೆಯಿಂದ ಬದುಕೇ ಕಷ್ಟವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈಗಾಗಲೇ ಸಿಬ್ಬಂದಿ ಕೊರತೆ ಇದೆ. ಖಾಸಗೀಕರಣವಾದರೆ 10 ಸಾವಿರಕ್ಕೂ ಹೆಚ್ಚು ನೌಕರರ ಉದ್ಯೋಗಕ್ಕೆ ಕತ್ತರಿ ಬೀಳಲಿದೆ. 30&-35 ವರ್ಷ ಸೇವೆ ಸಲ್ಲಿಸಿದವರನ್ನು ರಸ್ತೆಗೆ ಇಳಿಸುವುದು ಸರಿಯಲ್ಲ ಎಂದು ಅಳಲು ತೋಡಿಕೊಂಡರು.
ಹೆಸ್ಕಾಂಅನ್ನು ಖಾಸಗೀಕರಣ ನಿರ್ಧಾರ ಕೂಡಲೇ ವಾಪಸ್ ಪಡೆಯಬೇಕು. ಎಲ್ಲ ನೌಕರರ ಉದ್ಯೋಗ ಭದ್ರತೆ ಖಾತ್ರಿಪಡಿಸಬೇಕು. ವಿದ್ಯುತ್ ದರ ಏರಿಕೆ ಮಾಡದೇ ಸೇವೆ ಮುಂದುವರಿಸಬೇಕು. ಸರ್ಕಾರ ಒಂದು ವಾರದೊಳಗೆ ಮಾತುಕತೆಗೆ ಕರೆದಿಲ್ಲದಿದ್ದರೆ, ರಾಜ್ಯಾದ್ಯಂತ ಅನಿದಿರ್ಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರಮುಖರಾದ ಶಿವಾನಂದ ಹಾದಿಮನಿ, ಮಂಜು ಸಣ್ಣಲಿಂಗಮ್ಮನವರ, ಮಂಜುನಾಥ ಬಾಕಿರ್, ಪ್ರಭಾಕರ ಎಂ.ಎಚ್., ಬೀರಪ್ಪ ತಿಪ್ಪಣ್ಣನವರ, ಗೋಪಾಲ ಲಮಾಣಿ, ಎಸ್.ಜಿ. ಹೊಳೆಯಣ್ಣನವರ, ರೈತರಾದ ಸುರೇಶ ಎಣ್ಣಿ, ರಾಜು ಎನ್.ಪಿ., ಪರಶುರಾಮ ಹಿರೇಬಿದರಿ, ಕೆ.ಎಂ. ನದಾಫ್ ಮತ್ತಿತರರು ಪಾಲ್ಗೊಂಡಿದ್ದರು.