ಜಿಲ್ಲೆಯಲ್ಲಿ 8,600 ಜನರಿಗೆ ನರೇಗಾ ಕೆಲಸ; ಯೋಜನೆಗೆ ವೇಗ, ವಲಸೆಗೆ ಕಡಿವಾಣ; ಗ್ರಾಮೀಣ ಜನರಿಗೆ ಉದ್ಯೋಗ, ದಿನಕ್ಕೆ 370 ರೂ. ಕೂಲಿ

Haveri, ZP DS, Narega, Kuli,
Haveri, ZP DS, Narega, Kuli,
Published on
ಹಾವೇರಿ: ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಪರಿಣಾಮಕಾರಿಯಾಗಿ ಜಾರಿಯಾಗುತ್ತಿದ್ದು, ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಸ್ಥಳೀಯ ಮಟ್ಟದಲ್ಲೇ ಉದ್ಯೋಗಾವಕಾಶಗಳನ್ನು ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಬಲ ತುಂಬಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪುನಿತ್ ಬಿ.ಆರ್. ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಜಿಲ್ಲೆಯ 223 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು 8,600ಕ್ಕೂ ಅಧಿಕ ಕೂಲಿಕಾರರು ವಿವಿಧ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮಸ್ಥರಿಗೆ ಅವರ ಊರಿನಲ್ಲೇ ಕೆಲಸ ಲಭ್ಯವಾಗುತ್ತಿದೆ. ಹಾಗಾಗಿ, ವಲಸೆ ಕಡಿಮೆಯಾಗುವ ಜತೆಗೆ ಕುಟುಂಬಗಳ ಆರ್ಥಿಕ ಸ್ಥಿತಿಗೂ ನೆರವಾಗುತ್ತಿದೆ.
ನರೇಗಾ ಯೋಜನೆಯ ಮುಖ್ಯ ಉದ್ದೇಶ ಗ್ರಾಮೀಣ ಕುಟುಂಬಗಳಿಗೆ ವರ್ಷಕ್ಕೆ ಕನಿಷ್ಠ 100 ದಿನಗಳ ಕೂಲಿ ಆಧಾರಿತ ಉದ್ಯೋಗ ಒದಗಿಸುವುದಾಗಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ಕೆರೆ ಅಭಿವೃದ್ಧಿ, ಮಳೆ ನೀರು ಸಂಗ್ರಹಣೆ, ತೋಟಗಾರಿಕೆ, ಹಳ್ಳಿಗಳ ರಸ್ತೆ ಅಭಿವೃದ್ಧಿ, ಶಾಲಾ ಅವರಣ ಸುಧಾರಣೆ, ಅಂಗನವಾಡಿ ಕಟ್ಟಡ ಸುತ್ತಮುತ್ತಲಿನ ಕಾಮಗಾರಿಗಳು, ನೀರು ಹರಿವಿನ ಕಾಲುವೆಗಳ ನಿರ್ಮಾಣ, ಗದ್ದೆ ಬದು ನಿರ್ಮಾಣ ಸೇರಿದಂತೆ ಹಲವು ಶಾಶ್ವತ ಆಸ್ತಿ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಪ್ರಸ್ತುತ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿಕಾರರಿಗೆ ಪ್ರತಿದಿನ 370 ರೂ. ಕೂಲಿ ನೀಡಲಾಗುತ್ತಿದೆ. ಸರ್ಕಾರದಿಂದ ನಿಗದಿಪಡಿಸಿದ ಈ ಕೂಲಿ ಮೊತ್ತ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಜಮೆಯಾಗುವುದರಿಂದ ಪಾರದರ್ಶಕತೆ ಮತ್ತು ಭದ್ರತೆ ಹೆಚ್ಚಿದೆ.
ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನವನ್ನು ಮತ್ತಷ್ಟು ಬಲಪಡಿಸಲು ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸುತ್ತಿದ್ದು, ಅರ್ಹ ಕುಟುಂಬಗಳೆಲ್ಲರೂ ಯೋಜನೆಯ ಪ್ರಯೋಜನ ಪಡೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ನಿರುದ್ಯೋಗ ಕಡಿಮೆ ಮಾಡಿ, ಜನರಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ನರೇಗಾ ಯೋಜನೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಕಚೇರಿ ಸಂಪರ್ಕಿಸಬಹುದು. ಜತೆಗೆ ಸರ್ಕಾರದ ಉಚಿತ ಸಹಾಯವಾಣಿ ಸಂಖ್ಯೆ 8277506000ಗೆ ಕರೆಮಾಡಿ ಮಾಹಿತಿ ಪಡೆಯಬಹುದು. ಗ್ರಾಮೀಣ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯ ಸದುಪಯೋಗ ಪಡೆದು, ತಮ್ಮ ಗ್ರಾಮದಲ್ಲಿಯೇ ಉದ್ಯೋಗ ಹೊಂದುವಂತೆ ಡಾ.ಪುನೀತ್ ಮನವಿ ಮಾಡಿದ್ದಾರೆ.
26 ಸಾವಿರಕ್ಕೂ ಅಧಿಕ ಕಾಮಗಾರಿ
ಜಿಲ್ಲೆಯಲ್ಲಿ ಈಗಾಗಲೇ ಸುಮಾರು 26,000ಕ್ಕೂ ಅಧಿಕ ಕಾಮಗಾರಿಗಳಿಗೆ ಅನುಮೋದನೆಗೊಂಡಿದ್ದು, ಹಂತ ಹಂತವಾಗಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಉದ್ಯೋಗಕ್ಕಾಗಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಸಲ್ಲಿಸಲು ಅವಕಾಶವಿದ್ದು, ವಿಶೇಷವಾಗಿ ಮಹಿಳಾ ಕೂಲಿಕಾರರು, ಹಿರಿಯ ನಾಗರಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಈ ಯೋಜನೆ ಜೀವನೋಪಾಯದ ಪ್ರಮುಖ ಆಧಾರವಾಗುತ್ತಿದೆ ಎನ್ನುತ್ತಾರೆ ಜಿಪಂ ಉಪಕಾರ್ಯದರ್ಶಿ.
ಗ್ರಾಪಂನಲ್ಲಿ ಬೇಡಿಕೆ ಸಲ್ಲಿಸಿ
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಉದ್ಯೋಗ ಬೇಡಿಕೆ ಸ್ವೀಕರಿಸುವ ವ್ಯವಸ್ಥೆಯನ್ನು ಮತ್ತಷ್ಟು ಸುಗಮಗೊಳಿಸಲಾಗಿದೆ. ಕೂಲಿಕಾರರು ತಮ್ಮ ಗ್ರಾಮ ಪಂಚಾಯಿತಿಯಲ್ಲಿ ನಮೂನೆ-6 ಸಲ್ಲಿಸುವ ಮೂಲಕ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸಬಹುದಾಗಿದೆ. ಅದೇ ರೀತಿ ಕಾರ್ಮಿಕ ಸಂಘಟನೆಗಳು ಸಹ ಕೂಲಿಕಾರರ ಪರವಾಗಿ ನಮೂನೆ-6 ಮೂಲಕ ಕೆಲಸದ ಬೇಡಿಕೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೇಡಿಕೆ ಬಂದ ತಕ್ಷಣ ತ್ವರಿತವಾಗಿ ಕೆಲಸ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಾ.ಪುನೀತ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net