ಜನರ ಅಗತ್ಯಗಳಿಗೆ ಸ್ಪಂದಿಸುವುದೇ ಪ್ರಜಾಪ್ರಭುತ್ವ; ಜಿಪಂ ಸಿಇಒ ರುಚಿ ಬಿಂದಲ್ ಹೇಳಿಕೆ; ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ

haveri-zp-ceo, Panchayat Raj, Day,
haveri-zp-ceo, Panchayat Raj, Day,
Published on
ಹಾವೇರಿ: ಪಂಚಾಯತ್ ವ್ಯವಸ್ಥೆಯು ದೇಶದ ಅಭಿವೃದ್ಧಿಗೆ ಮೂಲ ಸ್ಥಂಭವಾಗಿದ್ದು, ಗ್ರಾಮ ಮಟ್ಟದಲ್ಲಿ ಜನರ ಅಗತ್ಯಗಳಿಗೆ ಸ್ಪಂದಿಸುವ ಆಡಳಿತವೇ ನಿಜವಾದ ಪ್ರಜಾಪ್ರಭುತ್ವದ ಸಾರ್ಥಕತೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್ ಹೇಳಿದರು.
ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪಂಚಾಯತ್‌ಗಳ ಮೂಲಕ ಸರ್ಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಅಧಿಕಾರಿಗಳು ಇನ್ನಷ್ಟು ಹೊಣೆಗಾರಿಕೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರತಿವರ್ಷ ಏ.24ರಂದು ದೇಶಾದ್ಯಂತ ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಏನೆಂದರೆ, ಗ್ರಾಮೀಣ ಆಡಳಿತ ವ್ಯವಸ್ಥೆಗೆ ಸಂವಿಧಾನಿಕ ಸ್ಥಾನಮಾನವನ್ನು ನೀಡಿದ 73ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನವನ್ನು ಸ್ಮರಿಸುವುದು. 1992ರಲ್ಲಿ ಅಂಗೀಕರಿಸಲ್ಪಟ್ಟು 1993ರ ಏಪ್ರಿಲ್ 24ರಂದು ಜಾರಿಗೆ ಬಂದ ಈ ಐತಿಹಾಸಿಕ ತಿದ್ದುಪಡಿ, ಭಾರತದಲ್ಲಿ ಸ್ಥಳೀಯ ಸ್ವರಾಜ್ಯ ಸಂಸ್ಥೆಗಳ ಬಲವರ್ಧನೆಗೆ ಮಹತ್ವದ ಮೈಲುಗಲ್ಲಾಗಿ ಪರಿಣಮಿಸಿದೆ ಎಂದರು.
ಇದರೊಂದಿಗೆ ಗ್ರಾಮ, ತಾಲೂಕು (ಮಧ್ಯಂತರ) ಮತ್ತು ಜಿಲ್ಲಾ ಮಟ್ಟಗಳಲ್ಲಿ ಮೂರು ಹಂತಗಳ ಪಂಚಾಯತ್ ವ್ಯವಸ್ಥೆಯನ್ನು ರೂಪಿಸಲಾಯಿತು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳು ಗ್ರಾಮೀಣ ಆಡಳಿತದ ಮೂಲ ಘಟಕಗಳಾಗಿ ಕಾರ್ಯನಿರ್ವಹಿಸುತ್ತಿವೆ. ಈ ತಿದ್ದುಪಡಿಯಿಂದ ಜನರಿಗೆ ಆಡಳಿತದಲ್ಲಿ ನೇರ ಪಾಲ್ಗೊಳ್ಳುವ ಅವಕಾಶ ದೊರೆಯುವುದರ ಜತೆಗೆ, ಪ್ರಜಾಪ್ರಭುತ್ವವನ್ನು ತಳಮಟ್ಟದವರೆಗೆ ತಲುಪಿಸುವ ಮಹತ್ವದ ಕಾರ್ಯ ಸಾಧ್ಯವಾಯಿತು ಎಂದು ಹೇಳಿದರು.
ವಿಶೇಷವಾಗಿ ಮಹಿಳೆಯರಿಗೆ ಕನಿಷ್ಠ ಶೇ.33 ಮೀಸಲಾತಿ ನೀಡಿರುವುದು, ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಮಹತ್ತರ ಉತ್ತೇಜನ ನೀಡಿದೆ. ಅನೇಕ ರಾಜ್ಯಗಳಲ್ಲಿ ಈ ಮೀಸಲಾತಿಯನ್ನು ಶೇ.50ರವರೆಗೆ ವಿಸ್ತರಿಸಲಾಗಿದೆ. ಇದು ಮಹಿಳೆಯರ ನಾಯಕತ್ವವನ್ನು ಇನ್ನಷ್ಟು ಬಲಪಡಿಸಿದೆ ಎಂದರು.
ಇದೇ ರೀತಿ, ಗ್ರಾಮ ಸಭೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಗ್ರಾಮ ಸಭೆಯು ಜನರ ನೇರ ಪಾಲ್ಗೊಳ್ಳುವಿಕೆಯನ್ನು ಪ್ರತಿಬಿಂಬಿಸುವ ವೇದಿಕೆಯಾಗಿದೆ. ಗ್ರಾಮದಲ್ಲಿ ನಡೆಯುವ ಅಭಿವೃದ್ಧಿ ಕಾರ್ಯಗಳು, ಯೋಜನೆಗಳ ಆಯ್ಕೆ, ವೆಚ್ಚದ ಪರಿಶೀಲನೆ ಹಾಗೂ ಸಾಮಾಜಿಕ ಲೆಕ್ಕಪತ್ರಗಳು ಗ್ರಾಮಸಭೆಯ ಮೂಲಕ ನಡೆಯುವ ವ್ಯವಸ್ಥೆ ಮಾಡಲಾಗಿದೆ. ಇದು ಪಾರದರ್ಶಕತೆ ಮತ್ತು ಜವಾಬ್ದಾರಿತ್ವವನ್ನು ಹೆಚ್ಚಿಸಲು ಸಹಕಾರಿ ಆಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪ ಕಾರ್ಯದರ್ಶಿ ಜಿ.ಪಂ.ಡಾ.ಪುನೀತ್ ಬಿ.ಆರ್., ಯೋಜನಾ ನಿರ್ದೇಶಕಿ ರೇಖಾ ಡೊಳ್ಳಿನ, ಎಲ್ಲ ತಾಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಅತ್ಯುತ್ತಮ ಸೇವಾ ಪುರಸ್ಕಾರ:
2025-26ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸಾಧನೆಗೈದ ತಾಲೂಕು ಪಂಚಾಯಿತಿಗಳು, ಗ್ರಾಮ ಪಂಚಾಯಿತಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಅತ್ಯುತ್ತಮ ಸೇವಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಹಲವರಿಗೆ ಸನ್ಮಾನ
ಅತೀ ಹೆಚ್ಚು ತೆರಿಗೆ ವಸೂಲಿ ಮಾಡಿದ ರಟ್ಟಿಹಳ್ಳಿ ತಾಲೂಕು ಪಂಚಾಯಿತಿಯ ಅಧಿಕಾರಿಗಳನ್ನು ಸನ್ಮಾನಿಸಲಾಯಿತು. ಶಿಗ್ಗಾಂವಿ ತಾಲೂಕಿನ ನಾರಾಯಣಪುರ ಗ್ರಾಮ ಪಂಚಾಯಿತಿ ಅತೀ ಹೆಚ್ಚು ತೆರಿಗೆ ವಸೂಲಿ ಮಾಡಿದ ಗ್ರಾಪಂ ಎಂಬ ಗೌರವಕ್ಕೆ ಪಾತ್ರವಾಗಿದೆ. ಈ ಸಾಧನೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ ತರವಂದ ಹಾಗೂ ಬಿಲ್ ಕಲೆಕ್ಕರ್ ಕೃಷ್ಣ ಕುಲಕರ್ಣಿ ಅವರ ಶ್ರಮ ಪ್ರಮುಖವಾಗಿದೆ ಎಂದು ಸಿಇಒ ಹೇಳಿದರು. ಗ್ರಾಮ ಪಂಚಾಯಿತಿ ಅರಿವು ಕೇಂದ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸಿದ ಹಾವೇರಿ ತಾಲೂಕಿನ ಹಾವನೂರ ಗ್ರಾಮ ಪಂಚಾಯಿತಿಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಅತ್ಯುತ್ತಮ ಮಹಿಳಾ ಸ್ನೇಹಿ ಉಪಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಾವೇರಿ ತಾಲೂಕಿನ ದೇವಗಿರಿ ಗ್ರಾಮ ಪಂಚಾಯಿತಿಗೆ ವಿಶೇಷ ಗೌರವ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net