ಬಾಂದಾರಗಳಲ್ಲಿ ನಳನಳಿಸುತ್ತಿದೆ ಜಲಧಾರೆ; ಗೇಟ್ ಸಮಸ್ಯೆಗೆ ಕೊನೆಗೂ ನಾಂದಿ ಹಾಡಿದ ಸಣ್ಣ ನೀರಾವರಿ ಇಲಾಖೆ; ರೈತರು, ಸಾರ್ವಜನಿಕರ ಮೊಗದಲ್ಲಿ ಮಂದಹಾಸ

Haveri, Rivers Check Dams,
Haveri, Rivers Check Dams,
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಭೂಮಿಗೆ ಬೇಸಿಗೆಯಲ್ಲಿ ನೀರುಣಿಸಲು
  • ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಸಹಕಾರಿ
  • ಬಾಂದಾರಗಳ ಗೇಟ್ ಸಮಸ್ಯೆಗೆ ಮುಕ್ತಿ
ಹಾವೇರಿ: ಕೃಷಿ ಭೂಮಿಗೆ ಬೇಸಿಗೆಯಲ್ಲಿ ನೀರುಣಿಸಲು ಹಾಗೂ ಜನ, ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಸಹಕಾರಿಯಾಗಲೆಂದು ಜಿಲ್ಲೆಯಲ್ಲಿ ವರದಾ, ಧರ್ಮಾ ನದಿಗಳಿಗೆ ಅಲ್ಲಲ್ಲಿ ನಿರ್ಮಿಸಲಾಗಿರುವ ಬಾಂದಾರಗಳ ಗೇಟ್ ಸಮಸ್ಯೆಗೆ ಮುಕ್ತಿ ಸಿಕ್ಕಿದ್ದು, ಬಹುತೇಕ ಎಲ್ಲ ಗೇಟ್‌ಗಳು ಬಂದ್ ಆಗಿವೆ. ಪರಿಣಾಮ ಬಾಂದಾರಗಳಲ್ಲಿ ಜನಧಾರೆ ನಳನಳಿಸುತ್ತಿದೆ.
ಸಣ್ಣ ನೀರಾವರಿ ಇಲಾಖೆಯ ರಾಣೆಬೆನ್ನೂರ ಹಾಗೂ ಹಾನಗಲ್ಲ ಉಪ ವಿಭಾಗದ ವ್ಯಾಪ್ತಿಯ 20ಕ್ಕೂ ಹೆಚ್ಚು ಬಾಂದಾರಗಳಲ್ಲಿ ಬಹುತೇಕ ಸೋರಿಕೆ ಉಂಟಾಗಿತ್ತು. ಕಳಸೂರ, ಮನ್ನಂಗಿ, ಶೇಷಗಿರಿ ಸೇರಿ, ಹಲವೆಡೆ ಗೇಟ್‌ಗಳು ಕಳ್ಳತನವಾಗಿದ್ದವು. ಇದರಿಂದ ಬೇಸಿಗೆ ಹತ್ತಿರ ಬಂದರೂ ಗೇಟ್ ಬಂದ್ ಮಾಡಲಾಗದೇ ರೈತರು, ಜನರು ಪರದಾಡುತ್ತಿದ್ದರು. ಕಣ್ಣೆದುರಲ್ಲೇ ನೀರು ಹರಿದು ಹೋಗುವುದನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದರು. ರಾಣೆಬೆನ್ನೂರ ಉಪ ವಿಭಾಗ ವ್ಯಾಪ್ತಿಯ ಸಂಗೂರು, ಹೊಸರಿತ್ತಿ, ಹಿರೇಮೆರಳಿಹಳ್ಳಿ, ಕರ್ಜಗಿ, ಬೆಳವಗಿ, ಮರಡೂರ ಬಾಂದಾರಗಳ ಗೇಟ್‌ಗಳನ್ನು ಬಂದ್ ಮಾಡಲಾಗಿದೆ. ಹಾನಗಲ್ಲ ಉಪವಿಭಾಗದ ಶೇಷಗಿರಿ, ಕೂಡಲ, ಕಳಸೂರ, ಮಕರವಳ್ಳಿ, ಕರ್ಜಗಿ, ಕೋಣನತಂಬಗಿ, ಮರಡೂರ, ನೀರಲಗಿ, ಬಾಂದಾರಗಳ ಗೇಟ್‌ಗಳನ್ನು ಮುಚ್ಚಲಾಗಿದೆ. ಧರ್ಮಾ ನದಿ ವ್ಯಾಪ್ತಿಯ ಬಾಂದಾರಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ. ಬಾಕ್ಸ್ ಸೂಕ್ತ ನಿರ್ವಹಣೆ ಬೇಕು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬಾಂದಾರಗಳ ನಿರ್ವಹಣೆಯನ್ನು ಮರೆಯದೇ ಸಮಯಕ್ಕೆ ಸರಿಯಾದ ನಿರ್ವಹಣೆ ಮಾಡಬೇಕಿದೆ. ಮಳೆ ಬಂದಾಗ ಗೇಟ್ ತೆರೆಯುವುದು, ಬೇಸಿಗೆಯಲ್ಲಿ ಗೇಟ್ ಬಂದ್ ಮಾಡುವುದು, ಕಿಂಡಿ ಬಿದ್ದ ಗೇಟ್‌ಗಳನ್ನು ದುರಸ್ತಿ ಮಾಡುವುದು, ಗೇಟ್‌ಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡುವ ಕೆಲಸವನ್ನು ಮಾಡಬೇಕಿದೆ. ಸೂಕ್ತ ನಿರ್ವಹಣೆ ಮಾಡಿದರೆ ದೊಡ್ಡ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಬಾಕ್ಸ್ ಎಚ್ಚರಿಸಿತ್ತು ‘ವಿಜಯವಾಣಿ’
ಬಾಂದಾರ ಸಮಸ್ಯೆಗಳ ಕುರಿತು ‘ಬಾಂದಾರ ಗೇಟ್‌ಗಳೇ ಮಾಯ’ ಎಂಬ ಶೀರ್ಷಿಕೆಯಡಿ ಅಕ್ಟೋಬರ್ 8ರಂದು ‘ವಿಜಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಬಾಂದಾರಗಳ ನಿರ್ವಹಣೆಯಲ್ಲಿ ಸಣ್ಣ ನೀರಾವರಿ ಇಲಾಖೆ ವೈಫಲ್ಯದ ಕುರಿತು ಎಳೆ ಎಳೆಯಾಗಿ ವರದಿ ಮೂಲಕ ಬಿಚ್ಚಿಟ್ಟಿತ್ತು. ವರದಿ ಬಳಿಕ ಎಚ್ಚೆತ್ತುಕೊಂಡ ಇಲಾಖೆ ಹಂತ ಹಂತವಾಗಿ ಬಾಂದಾರ ಗೇಟ್‌ಗಳ ಸಮಸ್ಯೆಗೆ ನಾಂದಿ ಹಾಡಿದೆ. ಇನ್ನೂ ಕೆಲವೆಡೆ ಗೇಟ್ ಬಂದ್ ಮಾಡುವ ಕಾರ್ಯಕ್ಕೆ ಮುಂದಾಗಿದೆ. ಇದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡುತ್ತಿದೆ.
ಸಂಗೂರು ಬ್ಯಾರೇಜ್ ಲೀಕೇಜ್
ಹಾವೇರಿ ತಾಲೂಕು ಸಂಗೂರ ವರದಾ ನದಿಯ ಬ್ಯಾರೇಜ್‌ನ ಗೇಟ್‌ಗಳನ್ನು ಸರಿಯಾಗಿ ಅಳವಡಿಸದ ಪರಿಣಾಮ ನದಿ ನೀರು ಸನ್ಣ ಪ್ರಮಾಣದಲ್ಲಿ ಹರಿದು ಹೋಗುತ್ತಿದೆ. ಈ ಕೂಡಲೇ ಸರಿಪಡಿಸಬೇಕು ಎಂದು ರೈತ ಮುಖಂಡ ಭುವನೇಶ್ವರ ಶಿಡ್ಲಾಪುರ ಒತ್ತಾಯಿಸಿದ್ದಾರೆ.
"

ಪ್ರಸಕ್ತ ವರ್ಷ ಉತ್ತಮವಾಗಿ ಮಳೆ ಸುರಿದ್ದರೂ ನದಿಯ ನೀರನ್ನು ಹಿಡಿದಿಟ್ಟುಕೊಳ್ಳಲಾಗದೇ ರೈತರು ಆತಂಕಕ್ಕೆ ಒಳಗಾಗಿದ್ದರು. ಸದ್ಯ ಕಸಳೂರ ಬಾಂದಾರ ಸೇರಿ ವಿವಿಧೆಡೆ ಬಾಂದಾರಗಳ ಗೇಟ್ ದುರಸ್ತಿಪಡಿಸಿ ಬಂದ್ ಮಾಡಿದ್ದರಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಆಗಲಿದೆ. ಜತೆಗೆ ರೈತರ ಜಮೀನುಗಳಿಗೂ ಸಹಕಾರಿಯಾಗಲಿದೆ. ‘ವಿಜಯವಾಣಿ’ ವರದಿಯಿಂದ ಎಚ್ಚೆತ್ತು ಇಲಾಖೆ ಸ್ಪಂದಿಸಿದ್ದು, ಪತ್ರಿಕಾ ಬಳಗಕ್ಕೆ ರೈತರ ಪರವಾಗಿ ಧನ್ಯವಾದಗಳು.

"

ಕೋಟ್: 30 ಲಕ್ಷ ರೂ. ವೆಚ್ಚದಲ್ಲಿ ಬಾಂದಾರಗಳ ದುರಸ್ಥಿ ಕಾರ್ಯ ಮಾಡಲಾಗಿದೆ. ಕಳಸೂರು ವರದಾ ನದಿಯ ಬಾಂದಾರದ 98 ಗೇಟ್‌ಗಳು ಕಳ್ಳತನ ಆಗಿದ್ದು, 100 ಹೊಸ ಗೇಟ್ ಮಾಡಿಸಲಾಗಿದೆ. ಎಲ್ಲ 135 ಗೇಟ್‌ಗಳನ್ನು ಹಾಕಿ ಬಂದ್ ಮಾಡಲಾಗಿದೆ. ಇದರಿಂದ ಈ ಬೇಸಿಗೆ ಕಳೆಯುವವರೆಗೆ ನೀರು ಪೂರೈಸಲು ಸಹಕಾರಿಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net