ಆತ್ಮವಿಶ್ವಾಸದಿಂದ ಸಮಸ್ಯೆ ಎದುರಿಸಿ ಗುರಿ ತಲುಪಿ; ಸೃಜನಶೀಲ ಉಪನ್ಯಾಸಕರ ಬಳಗದ ಪ್ರತಿಭಾ ಪುರಸ್ಕಾರದಲ್ಲಿ ಎಡಿಸಿ ಡಾ.ನಾಗರಾಜ ಸಲಹೆ

Haveri, Upanyasakara balaga, Students, Sanmana,
Haveri, Upanyasakara balaga, Students, Sanmana,
Published on
ಹಾವೇರಿ: ವಿದ್ಯಾರ್ಥಿ ಜೀವನ ಭವಿಷ್ಯವನ್ನು ಕಟ್ಟಿಕೊಳ್ಳಲು ಅತ್ಯಂತ ಶ್ರೇಷ್ಠವಾದ ಸಮಯ. ನಿರ್ದಿಷ್ಟ ಉನ್ನತ ಗುರಿಯೊಂದಿಗೆ ಕಠಿಣ ಪರಿಶ್ರಮ ಹಾಕಿದರೆ ಗುರಿ ತಲುಪಲು ಯಾವುದೇ ಸಂಶಯವಿಲ್ಲ. ಕುಟುಂಬದಲ್ಲಿ ಹಾಗೂ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ದಿಟ್ಟತನದಿಂದ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳುತ್ತಲೇ ಗುರಿ ತಲುಪಲೇಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ನಾಗರಾಜ ಎಲ್. ಸಲಹೆ ನೀಡಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಇತ್ತೀಚೆಗೆ ಸೃಜನಶೀಲ ಉಪನ್ಯಾಸಕರ ಬಳಗದ ವತಿಯಿಂದ ಆಯೋಜಿಸಿದ್ದ 2025-26ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ 10 ಟಾಪರ್ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಪಿಯುಸಿ ನಂತರ ಮುಂದೆ ಏನು ? ಎಂಬ ವಿಷಯದ ಕುರಿತ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕನಸುಗಳನ್ನು ಬೆನ್ನತ್ತಿ ಹೋಗುವಾಗ ಕುಟುಂಬದ ಆರ್ಥಿಕ ಪರಿಸ್ಥಿತಿ ಪ್ರಮುಖವಾಗಿ ಗಂಭೀರ ಪರಿಣಾಮ ಬೀರುತ್ತದೆ. ಶಿಸ್ತು ಬದ್ಧ ಅಧ್ಯಯನದಿಂದ ಅತಿ ಹೆಚ್ಚು ಅಂಕಗಳನ್ನು ಪಡೆಯುವ ಮೂಲಕ ಇಂತಹ ಸಮಸ್ಯೆಗಳನ್ನು ಎದುರಿಸಬಹುದು. ಯಾವುದೇ ಸಮಸ್ಯೆಗಳು ಎದುರಾದಾಗ ಅದಕ್ಕೆ ಪ್ರತಿಕ್ರಿಯಿಸುವ ಪಥಗಳನ್ನು ಬದಲಿಸಬೇಕೇ ಹೊರತು ನಿಮ್ಮ ಗುರಿಗಳನ್ನಲ್ಲ. ನಿಮಗಿಷ್ಟವಾದ ಸಾಧಕರನ್ನು ಪ್ರೇರಣೆಯಾಗಿ ತೆಗೆದುಕೊಳ್ಳಿ ಎಂದು ಕಿವಿಮಾತು ಹೇಳಿದರು.
ವೇದಿಕೆಯ ಗೌರವಾಧ್ಯಕ್ಷ ಶೇಖರ ಭಜಂತ್ರಿ ಮಾತನಾಡಿ, ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಅವರಿಗಾಗಿ ವಿಶೇಷ ಬೋಧನೆ, ಮಾರ್ಗದರ್ಶನ, ವ್ಯಕ್ತಿತ್ವ ನಿರ್ಮಾಣ, ಸೇವಾ ಮನೋಭಾವವನ್ನು ವೃದ್ಧಿಸುವ ಜತೆಗೆ ಉತ್ತಮ ಮೌಲ್ಯಗಳನ್ನು ತುಂಬುತ್ತ ರಾಷ್ಟ್ರ ನಿರ್ಮಾಣಕ್ಕೆ ಪ್ರಯತ್ನಿಸುವ ಅಂಶ ಇಟ್ಟುಕೊಂಡು ವೇದಿಕೆ ನಿರ್ಮಿಸಲಾಗಿದೆ ಎಂದರು.
ವೃತ್ತಿ ಮಾರ್ಗದರ್ಶಕಿ ಡಾ.ಉಮಾ ಬಳಿಗಾರ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಉದ್ಯಮಿ, ಸಮಾಜಸೇವಕ ಪ್ರಭಾಕರರಾವ್ ಮಂಗಳೂರು ಮಾತನಾಡಿದರು.
ಹಿರಿಯ ಸಾಹಿತಿ ಡಾ.ಸತೀಶ ಕುಲಕರ್ಣಿ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ವಸತಿ ನಿಲಯದ ಮೇಲ್ವಿಚಾರಕಿ ಪಕ್ಕೀರಮ್ಮ ಬಾರ್ಕಿ, ರವಿಕುಮಾರ, ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕಿ ಸಾವಿತ್ರಿ ಬಾರ್ಕಿ ಪ್ರಾರ್ಥಿಸಿದರು. ವೇದಿಕೆ ಅಧ್ಯಕ್ಷ ಮಂಜುನಾಥ ಹಟ್ಟಿಯವರ ಸ್ವಾಗತಿಸಿದರು. ಕಾರ್ಯದರ್ಶಿ ಮುತ್ತು ಗುತ್ತಲ ಸನ್ಮಾನಿಸಿದರು. ಅನಿತಾ ಹರನಗಿರಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net