ಸರ್ಕಾರಿ ಕೆಲಸವೇ ಬೇಕು ಎನ್ನಬೇಡಿ; ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸಿ; ಹಾವೇರಿ ವಿವಿ ಸಮಾರಂಭದಲ್ಲಿ ಜಾನಪದ ತಜ್ಞ ಡಾ.ಶಂಭು ಬಳಿಗಾರ ಕರೆ

Haveri, University, Zymakhana, Programm,
Haveri, University, Zymakhana, Programm,
Published on
ಹಾವೇರಿ: ಸರ್ಕಾರಿ ಉದ್ಯೋಗಾವಕಾಶಗಳು ಪ್ರತಿಶತ ಕೇವಲ 5ರಷ್ಟು ಮಾತ್ರ ಇರುತ್ತವೆ. ಹಾಗಾಗಿ, ಇಂದಿನ ಯುವ ಜನತೆ ಕೇವಲ ಸರ್ಕಾರಿ ಕೆಲಸವೇ ಬೇಕು ಎಂದು ಕಾಲಹರಣ ಮಾಡಬೇಡಿ. ಕೃಷಿ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಕೃಷಿಯನ್ನು ವೃತ್ತಿಯನ್ನಾಗಿ ಸ್ವೀಕರಿಸಿ ಜೀವನ ರೂಪಿಸಿಕೊಳ್ಳಿ ಎಂದು ಜಾನಪದ ತಜ್ಞ ಡಾ.ಶಂಭು ಬಳಿಗಾರ ಕರೆ ನೀಡಿದರು.
ನಗರದ ಹೊರವಲಯ ಕೆರಿಮತ್ತಿಹಳ್ಳಿಯ ಹಾವೇರಿ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ನಾತಕೋತ್ತರ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕೃಷಿ ವಲಯದಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳು ಇಂದಿನ ನಿರುದ್ಯೋಗ ಸಮಸ್ಯೆ ನಿವಾರಿಸಬಲ್ಲವು. ಇಂಜಿನಿಯರಿಂಗ್ ವೃತ್ತಿಯಲ್ಲಿದ್ದವರೂ ಕೂಡ ಇಂದು ಆ ಕ್ಷೇತ್ರವನ್ನು ಬಿಟ್ಟು ಕೃಷಿಯಲ್ಲಿ ಸಾಧನೆ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶೇಷ ಪ್ರತಿಭೆ, ಸಾಮರ್ಥ್ಯಗಳು ಇರುತ್ತವೆ. ಅವುಗಳನ್ನು ಹೊರಗೆ ತರುವಲ್ಲಿ ಪಠ್ಯೇತರ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ. ಕಠಿಣ ಪರಿಶ್ರಮ, ನಿರಂತರ ಪ್ರಯತ್ನಗಳಿಂದ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಅಗತ್ಯವಾಗಿದ್ದು, ಭಾವಿ ಜೀವನವನ್ನು ರೂಪಿಸಿಕೊಳ್ಳಲು ಲಭ್ಯ ಅವಕಾಶಗಳನ್ನು ಬೆಳೆಸಿಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕಾರ್ಯಪ್ರವೃತ್ತವಾಗಿದೆ. ಮುಂದಿನ ದಿನಗಳಲ್ಲಿ ಕ್ರೀಡಾಂಗಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕುಲಸಚಿವ ಪ್ರೊ.ಎಸ್.ಟಿ.ಬಾಗಲಕೋಟಿ ಮಾತನಾಡಿದರು.
ಜಿಮಖಾನಾ ಅಧ್ಯಕ್ಷ ಡಾ.ವೈ.ಟಿ.ಭಜಂತ್ರಿ ಪ್ರಶಸ್ತಿ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಉಪಾಧ್ಯಕ್ಷೆ ಡಾ.ರೇಖಾ ಬಾಳೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳಾದ ಲತಾ ಪಾಟೀಲ, ವಿನಾಯಕ ಕೆ. ಇತರರು ಉಪಸ್ಥಿತರಿದ್ದರು. ವಾಣಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net