ಹಾವೇರಿ: ಇಲ್ಲಿನ ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳಿಗೆ ಒಂದು ತಿಂಗಳು ಕಳೆದರೂ ಕನ್ನಡ ಭಾಷೆಯ ಸೆಮಿಸ್ಟರ್ ಪಠ್ಯಪುಸ್ತಕ ವಿತರಿಸದ ನಡೆ ಖಂಡಿಸಿ, ಕೂಡಲೇ ಪಠ್ಯಪುಸ್ತಕ ಬಿಡುಗಡೆಗೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ನೇತೃತ್ವದಲ್ಲಿ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಪ್ರಾಂಶುಪಾಲೆ ಡಾ.ಫರ್ಜಾನಾ ಪಠಾಣ ಮೂಲಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಅವರಿಗೆ ವಿದ್ಯಾರ್ಥಿಗಳು ಮನವಿ ಪತ್ರ ಸಲ್ಲಿಸಿದರು. ಈ ಹಿಂದೆ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬದಿಂದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ಗಳಲ್ಲಿ, ಪಠ್ಯಕ್ರಮ ಸಂಪೂರ್ಣ ವ್ಯವಸ್ಥಿತವಾಗಿ ನಡೆಯಲಿಲ್ಲ. ಈಗ ಪಠ್ಯಕ್ರಮ, ಪಠ್ಯಪುಸ್ತಕ ಮುದ್ರಣವಾಗದೇ ಕನ್ನಡ ಭಾಷೆಯ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಎಸ್‌ಎಫ್‌ಐ ಕಾರ್ಯಕರ್ತ ಅರುಣ ನಾಗವತ ಮಾತನಾಡಿ, ಹಾವೇರಿ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಪದವಿ ವಿದ್ಯಾರ್ಥಿಗಳ ತರಗತಿಗಳು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಕನ್ನಡ ಪಠ್ಯಪುಸ್ತಕ ಇಲ್ಲದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಪಠ್ಯಪುಸ್ತಕ ವಿಳಂಬದಿಂದ ಉಪನ್ಯಾಸಕರು ಜನರಲ್ ವಿಷಯಗಳ ಬಗ್ಗೆ ಬೋಧನೆ ಮಾಡುತ್ತಿದ್ದಾರೆ. ವಾರ್ಷಿಕ ವೇಳಾಪಟ್ಟಿ ಪ್ರಕಾರವಾಗಿ ಒಂದು ವಾರದ ನಂತರ ಕಿರು ಪರೀಕ್ಷೆ ಪ್ರಾರಂಭವಾಗಬೇಕು. ಆದರೆ, ಪಠ್ಯಪುಸ್ತಕದ ಪಿಡಿಎಫ್ ಕೂಡ ಲಭ್ಯವಿಲ್ಲದೇ ಯಾವ ಪಠ್ಯಕ್ರಮ (ಸಿಲೇಬಸ್) ಓದಬೇಕು ಎಂದು ವಿದ್ಯಾರ್ಥಿಗಳು ಗೊಂದಲದಲ್ಲಿದ್ದಾರೆ.
ಪ್ರತಿಬಾರಿಯೂ ಯಾವುದಾದರೂ ಒಂದು ಗೊಂದಲದಲ್ಲಿ ವಿದ್ಯಾರ್ಥಿಗಳನ್ನು ತಳುವ ವ್ಯವಸ್ಥೆ ರೂಢಿಗತವಾಗಿ ಬರುತ್ತಿದೆ. ಈ ವ್ಯವಸ್ಥೆ ನಿಲ್ಲಬೇಕು. ಇದರಿಂದ ಅಭ್ಯಾಸಕ್ಕೆ ಬಾರಿ ಹೊಡೆತ ಬಿಳುತ್ತದೆ. ಕೂಡಲೇ ಎಚ್ಚೆತುಕೊಂಡು ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು ಅಧಿಕೃತ ಪಠ್ಯಪುಸ್ತಕ ಬಿಡುಗಡೆ ಮಾಡಿ ಪಠ್ಯಪುಸ್ತಕ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹಾವೇರಿ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.